ಬೆಂಗಳೂರು:ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಫೂರ್ತಿ. ಹಿರಿಯರ ಬದುಕನ್ನು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಲಾಗಿದ್ದ 'ವಿಶ್ವ ಹಿರಿಯ ನಾಗರಿಕರ ದಿನಾಚರಣೆ-202' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, 'ಘನತೆಯ ಬಾಳಿನೊಂದಿಗೆ ವಯೋಪಕ್ವತೆ: ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ' ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಮಾಸಾಶನ ಹೆಚ್ಚಳದ ಬಗ್ಗೆ ಪರಿಶೀಲಿಸಿ ತೀರ್ಮಾನ: 2011ರ ಜನಗಣತಿ ಪ್ರಕಾರ, ರಾಜ್ಯದಲ್ಲಿ ಸುಮಾರು 57.91ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ, ಮಕ್ಕಳು ವಿದೇಶದಲ್ಲಿ ನೆಲಿಸಿ, ತಂದೆ-ತಾಯಿಯನ್ನು ಪೋಷಿಸಲು ಸಾಧ್ಯವಾಗದೆ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.