ಮೈಸೂರು:''ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಿ ಹತ್ತು ವರ್ಷಗಳ ಕಾಲ ಸಂಸದರನ್ನಾಗಿ ಮಾಡಿದೆ. ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಜೊತೆಗೆ ಮೊದಲ ಬಾರಿಗೆ ಒಟ್ಟಿಗೆ ಕುಳಿತು ಮಾತನಾಡಿದರು.
''ಯದುವೀರ್ ಒಡೆಯರ್ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ನಾವು ನಾಮಪತ್ರ ಸಲ್ಲಿಸಲು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಇದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಿತ ಅಭ್ಯರ್ಥಿಯಾಗಿದ್ದು, ಅವರನ್ನು ಈಗ ಜನರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದು ತುಂಬಾ ದೊಡ್ಡ ಕ್ಷೇತ್ರವಾಗಿದೆ. ಈ ಕ್ಷೇತ್ರ ಮೈಸೂರಿನ ಕಡಕೊಳದಿಂದ ಮಡಿಕೇರಿಯ ಕೇರಳ ಬಾರ್ಡರ್ವರೆಗೂ 200 ಕಿ.ಮೀ. ದೂರ ಇದೆ. ಈ ಕ್ಷೇತ್ರದಲ್ಲಿ ಜನರನ್ನು ತಲುಪಲು ಮಾಧ್ಯಮ ಮುಖ್ಯವಾಗಿದೆ. ಯದುವೀರ್ಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದರು.
''ಹತ್ತು ವರ್ಷಗಳ ಕಾಲ ಸಾಮಾನ್ಯ ಕಾರ್ಯಕರ್ತ ಆಗಿದ್ದ ನನಗೆ ಬಿಜೆಪಿ ಗುರುತಿಸಿ ಸಂಸದನಾಗಿ ಆಯ್ಕೆ ಮಾಡಿದೆ. ಈಗ ಬೇರೆವರನ್ನು ಪಕ್ಷ ಆಯ್ಕೆ ಮಾಡಿದೆ. ಇದನ್ನು ಸ್ವಾಗತಿಸುತ್ತೇನೆ ಎಲ್ಲವೂ ಹೈಕಮಾಂಡ್ ತೀರ್ಮಾನವಾಗಿದ್ದು, ನಾನು ಜನರಿಗೆ ಮತ್ತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಕ್ಷ ನನಗೆ ತಾಯಿ ಇದ್ದ ಹಾಗೆ:ಕಾಂಗ್ರೆಸ್ ಪಕ್ಷದಿಂದ ನಿಮಗೆ ಆಫರ್ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಇದೀಗ ಈ ಪ್ರಶ್ನೆ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಗೆಲ್ಲುವುದಷ್ಟೇ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಒಬ್ಬ ಮೈಸೂರು ವ್ಯಕ್ತಿ ಬೇಕು. ಅವರನ್ನ ನಾವು ಕಳುಹಿಸಿ ಕೊಡಬೇಕು ಅಷ್ಟೇ. ಪಕ್ಷ ನನಗೆ ತಾಯಿ ಇದ್ದ ಹಾಗೆ '' ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದರು.