ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಆನೆಯನ್ನು ನಿರಂತರ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಬೆಳಗ್ಗೆ ಸೆರೆ ಹಿಡಿದರು.
ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಹಿಂಭಾಗದ ಪ್ರದೇಶದಲ್ಲಿ ರಾಂಪುರ ಆನೆ ಶಿಬಿರದ ಪಾರ್ಥಸಾರಥಿ, ಗಣೇಶ ಹಾಗೂ ದುಬಾರೆ ಆನೆ ಶಿಬಿರದ ನಾಲ್ಕು ಆನೆಗಳ ಸಹಾಯದಿಂದ 45 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ತೊಂದರೆ ನೀಡುತ್ತಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಏ.15 ರಂದು ಕೂಂಬಿಂಗ್ ಆರಂಭಿಸಿದ್ದರು. ಬಳಿಕ, ಸೆರೆ ಕಾರ್ಯಾಚರಣೆ ನಿಲ್ಲಿಸಿದ್ದರು.
ನಂತರ, ಕಳೆದ 10 ದಿನಗಳಿಂದ ಪುಂಡಾನೆ ಸೆರೆಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ಕೊನೆಗೂ ಯಶಸ್ಸು ಕಂಡಿದ್ದಾರೆ. ಮಾ.10ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರಕ್ಕೆ ಭೇಟಿ ನೀಡಿದ್ದಾಗ ಹಂಗಳ ಗ್ರಾಮದ ಮಾಧು ಹಾಗೂ ಇತರೆ ರೈತರು ಪುಂಡಾನೆ ಸೆರೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಚಿವರು ಆನೆ ಸೆರೆಗೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಕುರಿತು, ಬಂಡೀಪುರ ಸಿಎಫ್ಒ ಪ್ರಭಾಕರನ್ ಮಾಹಿತಿ ನೀಡಿದ್ದು, "ಆನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೆರೆ ಸಿಕ್ಕ ಆನೆಗೆ 40 ವರ್ಷ ಎಂದು ಅಂದಾಜಿಸಲಾಗಿದೆ. ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ:ನಡುರಸ್ತೆಯಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ: ಹೆದ್ದಾರಿಯಲ್ಲಿ ತಾಯಿ ಆನೆ ರೋದನೆ - Baby Elephant Died