ಚಿಕ್ಕೋಡಿ (ಬೆಳಗಾವಿ) : ಭೂ ವ್ಯಾಜ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕುಟುಂಬಸ್ಥರು ಶವ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮಂಗಳವಾರ ಪುರಂದರ ಜೋಗೆ (70) ಎಂಬುವರು ಸಾವನ್ನಪ್ಪಿದ ಹಿನ್ನೆಲೆ ಅವರ ಪತ್ನಿ ಸುವರ್ಣ ಜೋಗೆ ಹಾಗೂ ಪುತ್ರ ಲಕ್ಷ್ಮಣ ಜೋಗೆ ಮತ್ತು ಕುಟುಂಬಸ್ಥರು ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಘಟನೆ ಏನು? : ''ಪತಿ ಪುರಂದರ ಜೋಗೆ ಹೆಸರಲ್ಲಿ ಒಟ್ಟು 11 ಗುಂಟೆ ಜಾಗ ಇತ್ತು. ಮನೆಯ ಆರ್ಥಿಕ ದುಸ್ಥಿತಿ ಹಿನ್ನೆಲೆ ಅದೇ ಗ್ರಾಮದ ಸಿಕಂದರ್ ಕಿಲ್ಲೇದಾರ ಎಂಬುವರಿಗೆ 2005 ರಲ್ಲಿ 3.5 ಗುಂಟೆ ಜಾಗ (ಜಮೀನು) ಮಾರಿದ್ದೆವು. ಆದರೆ ಸಿಕಂದರ್ 8 ಗುಂಟೆ ಅತಿಕ್ರಮಣ ಮಾಡಿಕೊಂಡು ನಮ್ಮ ಜಾಗವನ್ನು ಬಿಟ್ಟಿಲ್ಲ. ಪುರಂದರ ಅವರು ಜಮೀನು ಬಿಟ್ಟು ಕೊಡುವಂತೆ ಸಾಕಷ್ಟು ಬಾರಿ ಸಿಕಂದರ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಸ್ಪಂದನೆ ಮಾಡಿರಲಿಲ್ಲ. ಇದರಿಂದ ನನ್ನ ಗಂಡ ಮನನೊಂದು ಸಾವನ್ನಪ್ಪಿದ್ದಾರೆ. ಹೀಗಾಗಿ ಅತಿಕ್ರಮಣವಾಗಿರುವ ಸ್ಥಳದಲ್ಲಿ ನನ್ನ ಗಂಡನ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದೇವೆ'' ಎಂದು ಪುರಂದರ ಅವರ ಪತ್ನಿ ಸುವರ್ಣ ಜೋಗೆ ಅವರು ಹೇಳಿದರು.