ರಾಮನಗರ :"ಚನ್ನಪಟ್ಟಣದಲ್ಲಿ ಶಾಸಕರು ಇದ್ದಿದ್ದರೆ ನಾನೇಕೆ ಬರುತ್ತಿದ್ದೆ? ಕುರ್ಚಿ ಖಾಲಿ ಇರುವುದಕ್ಕೆ ಬಂದು ಕುಳಿತಿದ್ದೇನೆ. ಬೇರೆಯವರು ಕುರ್ಚಿಯಲ್ಲಿ ಕುಳಿತಿದ್ದರೆ ಬರುತ್ತಿದ್ದೇನೆಯೇ? ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದಲ್ಲಿ 'ನಡೆದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಕಾರಣಕ್ಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದರು.
ಅಂದುಕೊಳ್ಳಲಿ ಬಿಡಿ. ಉಪಚುನಾವಣೆ ಕಾರಣಕ್ಕೆ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ ಅಂದುಕೊಳ್ಳುವುದರಲ್ಲಿ ತಪ್ಪೇನಿದೆ? ನಾವು ನಮ್ಮ ಕೆಲಸ ಮಾಡುತ್ತೇವೆ. ಜನಕ್ಕೆ ಸ್ಪಂದನೆ ಮಾಡಬೇಕಲ್ಲವೇ? ಎಂದರು. ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಿಂದ ಬದಲಾವಣೆ ಆಗುತ್ತಿದೆಯೇ? ಎನ್ನುವ ಪ್ರಶ್ನೆಗೆ "ಖಂಡಿತ ಆಗುತ್ತಿದೆ. ಕ್ಷೇತ್ರದ ನಾಯಕರು ಜನರ ಬಳಿಗೆ ಹೋಗಿಲ್ಲ ಎನ್ನುವ ಟೀಕೆಗೆ 'ಬಾಗಿಲಿಗೆ ಬಂತು ಸರ್ಕಾರ' ಕಾರ್ಯಕ್ರಮವೇ ಉತ್ತರ. ಸಾವಿರಾರು ಜನ ಅರ್ಜಿ ಹಿಡಿದುಕೊಂಡು ಬರುತ್ತಿದ್ದಾರೆ. ಈಗ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಎಲ್ಲ ಮಂತ್ರಿಗಳು ಜನಸ್ಪಂದನ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ನಾನು ಇದನ್ನೇ ಬೇರೆ ಸ್ವರೂಪದಲ್ಲಿ ಮಾಡುತ್ತಿದ್ದೇನೆ. ಇದೇ ರೀತಿ ರಾಜ್ಯಾದ್ಯಂತ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದ ಸ್ವರೂಪದಲ್ಲಿ ಜನಸ್ಪಂದನ ಮುಂದುವರೆಯುತ್ತದೆ. ಮಂತ್ರಿಗಳು ಹಾಗೂ ಶಾಸಕರು ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಲಾಗುವುದು. ತಾಲೂಕು, ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ನಿವಾರಿಸಿದರೆ ಬೆಂಗಳೂರಿನಲ್ಲಿ ಒತ್ತಡ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ವಸತಿ ವಿಚಾರಕ್ಕೆ ಏಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಮನುಷ್ಯನ ಜೀವನದಲ್ಲಿ ಎರಡೇ ಆಸೆ. ತಲೆ ಮೇಲೆ ಒಂದು ಸೂರು, ಉದ್ಯೋಗ. ಮನೆ ಇದ್ದರೆ ಎಲ್ಲವೂ ಇದ್ದಂತೆ. ಅದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ನಂತರ ವಸತಿ ಉದ್ದೇಶಗಳಿಗೆ ಅಧಿಕಾರಿಗಳು ಹುಡುಕಿರುವ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡುತ್ತೇನೆ. ವಸತಿ ಸಚಿವ ಜಮೀರ್, ಕೃಷ್ಣ ಬೈರೇಗೌಡ ಅವರ ಬಳಿಯೂ ಮಾತನಾಡಲಾಗಿದ್ದು, ಅವರೂ ಒಮ್ಮೆ ಭೇಟಿ ನೀಡುತ್ತಾರೆ" ಎಂದರು.
ಚನ್ನಪಟ್ಟಣಕ್ಕೆ ಮಾತ್ರ ವಿಶೇಷ ಅನುದಾನ ಮಾತ್ರವಾ ಅಥವಾ ಬೇರೆ ಕ್ಷೇತ್ರಗಳಿಗೂ ಅನುದಾನ ಸಿಗಲಿದೆಯೇ ಎಂದು ಕೇಳಿದಾಗ, "ಉಪಚುನಾವಣೆ ಇರುವ 3 ಕ್ಷೇತ್ರಗಳಿಗೆ ವಿಶೇಷ ಅನುದಾನ ಸಿಗಲಿದೆ. ಈ ಹಿಂದೆ ಬಿಜೆಪಿ, ದಳದವರು ಇದೇ ರೀತಿ ಮಾಡಿಲ್ಲವೇ? ಅದಕ್ಕೆ ನಾವೂ ಮಾಡುತ್ತೇವೆ ಎಂದರು. ಅಚ್ಚರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಬಗ್ಗೆ ಕೇಳಿದಾಗ, ಯಾರೇ ಅಭ್ಯರ್ಥಿಯಾದರು ನನಗೆ ಮತ ಹಾಕಿದಂತೆ. ಯಾರು ಏನು ಬೇಕಾದರೂ ಖುಷಿಪಡಲಿ, ಚರ್ಚೆ ಮಾಡಲಿ ಎಂದು ಹೇಳಿದರು.
ಇಡೀ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡುತ್ತೀರಾ? ಎಂದು ಕೇಳಿದಾಗ, "ನಾವು ಜನ ಸೇವೆ ಮಾಡಲು ಬಂದಿದ್ದೇವೆ. ಅದು ಮುಖ್ಯವೇ ಹೊರತು, ರಾಜಕೀಯವಲ್ಲ" ಎಂದು ಹೇಳಿದರು. ತಾಲೂಕಿನಲ್ಲಿ ಓಡಾಡಿರುವುದರಿಂದ ಜನರ ನಾಡಿಮಿಡಿತ ಅರ್ಥವಾಗಿದೆಯೇ ಎಂದಾಗ, "ಜನರ ನಾಡಿ ಮಿಡಿತ ಅರಿಯುವ ಮೊದಲು ಅವರ ಹೃದಯದ ಒಳಗೆ ಹೋಗೋಣ" ಎಂದರು.