ಮೈಸೂರು :ನಿನ್ನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಸ್ತೆಯಲ್ಲಿ ಆನೆಯೊಂದು ಪ್ರಯಾಣಿಕರ ಮೇಲೆ ದಾಳಿ ಮಾಡಿದಾಗ ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಈಟಿವಿ ಭಾರತ್ ಜೊತೆ ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಮಾತನಾಡಿದ್ದಾರೆ. ಆನೆ ಏಕೆ ದಿಢೀರ್ ಪ್ರಯಾಣಿಕರ ಮೇಲೆ ದಾಳಿ ಮಾಡಿತು? ಎಂಬ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಪರಿಹಾರ ಏನು? ಎಂಬುದರ ಕುರಿತು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಆನೆಯ ದಿಢೀರ್ ದಾಳಿಗೆ ಕಾರಣವೇನು ?: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿನ್ನೆ ಪ್ರಯಾಣಿಕರೊಬ್ಬರ ಮೇಲೆ ಆನೆಯೊಂದು ದಿಢೀರ್ ಎಂದು ದಾಳಿ ಮಾಡಿದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಕಾಡಾನೆಗೆ ಕಾರಿನಲ್ಲಿ ಬರುತ್ತಿದ್ದ ಪ್ರಯಾಣಿಕರು ಆನೆ ಕಂಡ ತಕ್ಷಣ ಫೋಟೋ ತೆಗೆಯಲು ಹೋಗಿರಬೇಕು ಅಥವಾ ಕಿರಿಕಿರಿ ಮಾಡಿರಬೇಕು. ಆನೆಗಳು ಸಾಮಾನ್ಯವಾಗಿ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ರಸ್ತೆ ದಾಟುವಾಗ ಏನೋ ಕಿರಿಕಿರಿ ಆಗಿರಬೇಕು. ಅದಕ್ಕೋಸ್ಕರ ದಿಢೀರ್ ದಾಳಿ ಮಾಡಿರಬಹುದು. ಆ ಪ್ರದೇಶ ಆನೆಗಳ ಆವಾಸ ಸ್ಥಾನವಾಗಿದೆ. ಆ ಪ್ರದೇಶಗಳಲ್ಲಿ ಕಿರಿಕಿರಿ ಆದಾಗ ಆನೆ ಸೇರಿದಂತೆ ಇತರ ಕಾಡುಪ್ರಾಣಿಗಳು ಈ ರೀತಿ ದಾಳಿ ಮಾಡುವುದು ಸಹಜ ಎಂದಿದ್ದಾರೆ.
ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಗಳೇನು?: ಸಾಮಾನ್ಯವಾಗಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಂಚಾರ ಮಾಡುವಾಗ ನೋ ಪಾರ್ಕಿಂಗ್, ನೋ ಹಾರ್ನ್ ಹಾಗೂ ನಿಧಾನವಾಗಿ ಚಲಿಸಬೇಕು. ಜೊತೆಗೆ ಕಾಡುಪ್ರಾಣಿಗಳು ಕಂಡು ಬಂದಾಗ ದೂರದಲ್ಲೇ ವಾಹನ ನಿಲ್ಲಿಸಬೇಕು. ವಾಹನದಿಂದ ಕೆಳಗಿಳಿಯಬಾರದು ಹಾಗೂ ಪ್ರಾಣಿಗಳ ಬಳಿ ಹೋಗಿ ಕಿರಿಕಿರಿ ಮಾಡಬಾರದು ಎಂದಿದ್ದಾರೆ.