ಇಂದ್ರಾಳಿ ರೈಲ್ವೆ ನಿಲ್ದಾಣ (ETV Bharat) ಉಡುಪಿ:ಕಳೆದ 10 ವರ್ಷಗಳಲ್ಲಿ ದೇಶದ ರೈಲ್ವೇ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ರೈಲು ನಿಲ್ದಾಣಗಳ ಆಧುನೀಕರಣ, ಹೊಸ ಮಾದರಿಯ ವೇಗದ ರೈಲುಗಳ ಆರಂಭ, ಸಮಯ ಪಾಲನೆ ಸೇರಿದಂತೆ ಎಲ್ಲದರಲ್ಲೂ ರೈಲ್ವೆ ಗಮನ ಸೆಳೆಯುತ್ತಿದೆ. ಬೇರೆ ಕಡೆ ಏನೇ ಆದರೂ ಕೃಷ್ಣ ನಗರಿ ಉಡುಪಿಯಲ್ಲಿರುವ ಇಂದ್ರಾಳಿ ರೈಲು ನಿಲ್ದಾಣ ಮಾತ್ರ ಸ್ವಲ್ಪವೂ ಕದಲದೆ ಕುಳಿತಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ಉಡುಪಿ ರೈಲು ನಿಲ್ದಾಣ ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶ. ಕೊಂಕಣ ರೈಲ್ವೆ ನಿಗಮಕ್ಕೆ ಒಳಪಟ್ಟ ನಿಲ್ದಾಣಕ್ಕೆ 31 ವರ್ಷಗಳ ಇತಿಹಾಸವಿದೆ. ಕೃಷ್ಣ ಮಠ ಸೇರಿದಂತೆ ಕರಾವಳಿಯ ನಾನಾ ದೇಗುಲಗಳಿಗೆ ಬರುವವರಿಗೆ ಉಡುಪಿ ರೈಲು ನಿಲ್ದಾಣವೇ ಇಳಿದಾಣ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗೆ ಹೆಸರಾದ ಮಣಿಪಾಲಕ್ಕೆ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಮತ್ತು ಇತರರು ರೈಲಿನ ಮೂಲಕ ಬರುತ್ತಾರೆ. ಅವರು ರೈಲು ಹತ್ತುವುದು ಮತ್ತು ಇಳಿ ಯುವುದು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ಇಂದ್ರಾಳಿ ನಿಲ್ದಾಣವೇ ಪ್ರಮುಖ ಕೊಂಡಿ: ಉಡುಪಿ-ಮುಂಬೈ ಜನರಿಗೆ ಓಡಾಟಕ್ಕೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣ ಪ್ರಮುಖ ಕೊಂಡಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಉಡುಪಿ ಭಾಗದ ಪ್ರತಿ ಮನೆಗೂ ಮುಂಬಯಿ ಜತೆಗೆ ಸಂಪರ್ಕವಿದೆ. ಇಲ್ಲಿನ ಸಾವಿರಾರು ಮಂದಿ ಮುಂಬಯಿಯಲ್ಲಿ ಉದ್ಯಮ, ವ್ಯವಹಾರ ನಡೆಸುತ್ತಿದ್ದಾರೆ. ಅವರೆಲ್ಲರ ಓಡಾಟಕ್ಕೆ ರೈಲೇ ಜೀವನಾಡಿಯಾಗಿದೆ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ಕರಾವಳಿಯವರೇ ಆದ ಜಾರ್ಜ್ ಫೆರ್ನಾಂಡಿಸ್ ಅವರ ಪ್ರಯತ್ನದ ಫಲವಾಗಿ ಮಂಗಳೂರಿನಿಂದ ಮುಂಬೈಗೆ ಕೊಂಕಣ ರೈಲು ಆರಂಭವಾಗಿತ್ತು. ಈ ಮಾರ್ಗದಲ್ಲಿ ಮೊದಲ ರೈಲು ಓಡಿದ್ದೇ ಮಂಗಳೂರು ಮತ್ತು ಉಡುಪಿ ಮಧ್ಯೆ. ಅದು ಇದೇ ಇಂದ್ರಾಳಿ ನಿಲ್ದಾಣದಿಂದ. ಇಷ್ಟು ದೊಡ್ಡ ಹಿನ್ನೆಲೆ ಇರುವ ಇಂದ್ರಾಳಿ ರೈಲ್ವೆ ಸ್ಟೇಷನ್ ಕಾಲಕ್ಕೆ ತಕ್ಕಂತೆ ಬದಲಾಗದೆ ಹಿಂದೆ ಬಿದ್ದಿದೆ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ದಿನಕ್ಕೆ 75 ರೈಲು ಸಂಚಾರ:ಇಂದ್ರಾಳಿ ರೈಲು ನಿಲ್ದಾಣದ ಮೂಲಕ ದಿನಕ್ಕೆ 75 ಪ್ರಯಾಣಿಕ ರೈಲುಗಳು ಓಡಾಡುತ್ತವೆ. ಗೂಡ್ಸ್ ರೈಲು ಪ್ರತ್ಯೇಕ. ಒಂದೊಂದು ರೈಲಿನಲ್ಲಿ 75 ಜನ ಹತ್ತಿಳಿಯುತ್ತಾರೆ ಎಂಬ ಲೆಕ್ಕ ಹಿಡಿದರೂ ಕನಿಷ್ಠ ದಿನಕ್ಕೆ 5,000 ಜನ ಓಡಾಡುತ್ತಾರೆ. ಕರಾವಳಿ ಹಾಗೂ ಮುಂಬೈಯನ್ನು ಸಂಪರ್ಕಿಸುವ ಕೊಂಕಣ ರೈಲ್ವೆಯ ಮಹತ್ವದ ನಿಲ್ದಾಣವಿದು. ರತ್ನಗಿರಿ ಮತ್ತು ಮಡಗಾಂವ್ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ವಾಣಿಜ್ಯ ವಹಿವಾಟು ಇರುವ ನಿಲ್ದಾಣ. ಉಡುಪಿ, ಮಣಿಪಾಲದಂತ ಧಾರ್ಮಿಕ, ಶೈಕ್ಷಣಿಕ ಕೇಂದ್ರಕ್ಕೆ ದೇಶದ ವಿವಿಧ ಭಾಗದ ಜನರು, ವಿದ್ಯಾರ್ಥಿಗಳ ಸಂಪರ್ಕ ಕೂಡ ಆಗಿದೆ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ಉದ್ಘಾಟನೆ ದಿನ ಮಾತ್ರ ಸೇವೆ ನೀಡಿದ ಎಸ್ಕಲೇಟರ್!: 2016ರಲ್ಲಿ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಇಂದ್ರಾಳಿ ಸ್ಟೇಷನ್‌ನಲ್ಲಿ ಎಸ್ಕಲೇಟರ್ ಉದ್ಘಾಟನೆ ಮಾಡಿದ್ದರು. ಅದು ಕೆಲಸ ಮಾಡಿದ್ದು ಅದೊಂದು ದಿನ ಮಾತ್ರ! ವಾಹನಗಳು ರೈಲ್ವೆ ನಿಲ್ದಾಣದ ಒಳಭಾಗದವರೆಗೂ ಬರುತ್ತವೆ. ಹಾಗಿರುವಾಗ ಎಸ್ಕಲೇಟರ್ ಯಾಕೆ ಬೇಕು ಎನ್ನುವುದು ಇನ್ನೂ ಯಾರಿಗೂ ತಿಳಿದಿಲ್ಲ. ಈಗ ಇಲ್ಲಿ ನೋ ಎಂಟ್ರಿ ಫಲಕ ಅಳವಡಿಸಲಾಗಿದೆ. ಇದಕ್ಕಾಗಿ ಮಾಡಿರುವ ಎಲ್ಲ ವ್ಯವಸ್ಥೆಗಳೂ ಈಗ ತುಕ್ಕುಹಿಡಿದಿದ್ದು, ಬೀದಿನಾಯಿಗಳ ವಾಸಸ್ಥಾನವಾಗಿ ಪರಿಣಮಿಸಿದೆ.
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat) ಪ್ರಮುಖ ಸಮಸ್ಯೆಗಳು ಏನೇನು?:
- ಸ್ವಚ್ಛತೆ ಎಂಬುದು ಇಲ್ಲಿ ಕಾಣುವುದಿಲ್ಲ.
- ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ.
- ಪ್ಲಾಟ್‌ಫಾರಂನ ಹಲವು ಕಡೆ ಶೆಲ್ಟರ್‌ಗಳೇ ಇಲ್ಲ. ಇರುವ ಕೆಲವು ಶೆಲ್ಟರ್‌ಗಳು ತೂತು ಬಿದ್ದಿವೆ.
- ರೈಲು ಹತ್ತಲು ಹೋಗುವಾಗ, ರೈಲು ಇಳಿಯುವಾಗ ಮಳೆ ಬಂದರೆ ನೆನೆಯಬೇಕು.
- ಒಂದು ಪ್ಲಾಟ್ಫಾರಂನಿಂದ ಇನ್ನೊಂದಕ್ಕೆ ಹೋಗಲು ವ್ಯವಸ್ಥೆಗಳು ಸೂಕ್ತವಾಗಿಲ್ಲ.
- ಸುರಕ್ಷತೆ ವಿಚಾರದಲ್ಲಿ ರೈಲು ನಿಲ್ದಾಣ ತುಂಬಾ ಹಿಂದೆ ಬಿದ್ದಿದೆ.
- ಶೌಚಾಲಯಗಳು ಹೆಚ್ಚಿಲ್ಲ, ಇರುವುದು ಕೂಡಾ ಸ್ವಚ್ಛವಿಲ್ಲ.
- ರೈಲು ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲ.
- ಕುಡಿಯಲು ಒಂದೇ ಕಡೆ ಫಿಲ್ಟರ್ ನೀರಿದೆ. ಆದರೆ ಎರಡೂ ಗ್ಲಾಸ್ ಮಾಯ
ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ದೃಶ್ಯ (ETV Bharat)
ಇನ್ನು ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು, ಉಡುಪಿ ಇಂದ್ರಾಳಿಯ ನಿಲ್ದಾಣ ಅಭಿವೃದ್ಧಿಗೆ ಈ ಬಾರಿ ಅನುದಾನ ಬಿಡುಗಡೆಯಾಗಿದೆ. ಮಳೆಗಾಲ ಮುಗಿದ ಬಳಿಕ ಕೆಲಸ ಆರಂಭ ಮಾಡುವುದಾಗಿ ಮಾಹಿತಿ ನೀಡಿದರು.
ಓದಿ:ನಾವು ಯಾರಿಗೂ ಕಮ್ಮಿ ಇಲ್ಲ: ಈ ಅಕ್ಕ-ತಂಗಿ ಭಲೇ ಜೋಡಿ, ಪೋಷಕರ ಪಾಲಿಗೆ ಇವರೇ ದೇವರು! - National Sisters Day