ಬೆಂಗಳೂರು: ಹಾಸನ ಪೆನ್ಡ್ರೈವ್ ಕೇಸ್ ಮತ್ತು ಹೆಚ್.ಡಿ ರೇವಣ್ಣ ಬಂಧನ ವಿಚಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಿತ್ರಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಅನೌಪಚಾರಿಕ ಮಾತುಕತೆ ನಡೆಸಿದರು. ಆದರೆ ಈ ವಿಚಾರಗಳಲ್ಲಿ ಹೆಚ್ಚಿನ ಚರ್ಚೆಗೆ ಅಮಿತ್ ಶಾ ಆಸಕ್ತಿ ತೋರಲಿಲ್ಲ ಎಂದು ತಿಳಿದುಬಂದಿದೆ.
ಪ್ರಜ್ವಲ್ ಪ್ರಕರಣ ಮತ್ತು ರೇವಣ್ಣ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೂ ನಿರಂತರ ಸಭೆ ನಡೆಸಿದರು. ಆಪ್ತರ ಜೊತೆ ಸಮಾಲೋಚನೆ ನಡೆಸಿ ಸಲಹೆಗಳ ಪಡೆದುಕೊಂಡರು. ಸಭೆ ಮುಗಿಸುವ ವೇಳೆಗೆ ಹೋಟೆಲ್ಗೆ ಅಮಿತ್ ಶಾ ಬರುವ ಸುದ್ದಿ ಕುಮಾರಸ್ವಾಮಿಗೆ ತಿಳಿದೆ. ಹೀಗಾಗಿ ಕುಮಾರಸ್ವಾಮಿ ಹೋಟೆಲ್ನಿಂದ ನಿರ್ಗಮಿಸದೇ ಅಲ್ಲೇ ಕಾದು ಕುಳಿತರು. 8.15 ರ ಸುಮಾರಿಗೆ ಹೋಟೆಲ್ಗೆ ಬಂದ ಅಮಿತ್ ಶಾ, ಮಿತ್ರಪಕ್ಷದ ನಾಯಕ ಹೆಚ್‌ಡಿ ಕುಮಾರಸ್ವಾಮಿ ಭೇಟಿಗೆ ಸಮ್ಮತಿ ನೀಡಿದರು.
15-20 ನಿಮಿಷಗಳ ಕಾಲ ಅಮಿತ್ ಶಾ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಹೇಳಿದ ವಿಷಯಗಳನ್ನು ಆಲಿಸಿದ ಅಮಿತ್ ಶಾ ಹೆಚ್ಚಿನ ಚರ್ಚೆಗೆ ಮುಂದಾಗಲಿಲ್ಲ ಮತ್ತು ಆಸಕ್ತಿಯೂ ತೋರಲಿಲ್ಲ ಎನ್ನಲಾಗಿದೆ. ಪೆನ್ಡ್ರೈವ್ ಕೇಸ್ ನಂತರ ಪ್ರಜ್ವಲ್ ವಿದೇಶಕ್ಕೆ ತೆರಳಿರುವುದು, ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದ್ದು ಸೇರಿದಂತೆ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎನ್ನುವ ಆಯಾಮದಲ್ಲಿ ಅಮಿತ್ ಶಾ ಗಮನಕ್ಕೆ ಎಲ್ಲ ವಿಷಯ ತಂದಿದ್ದಾರೆ. ಆದರೆ ಈ ವಿಚಾರದಲ್ಲಿ ಅಮಿತ್ ಶಾ ಕಡೆಯಿಂದ ಯಾವುದೇ ಆಶ್ವಾಸನೆ, ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.
ಮಿತ್ರಪಕ್ಷದ ನಾಯಕನಾಗಿ ನಮ್ಮ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಬಿಜೆಪಿ ವರಿಷ್ಠ ನಾಯಕ ಅಮಿತ್ ಶಾ ಗಮನಕ್ಕೆ ತರಬೇಕು ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಸಂಕಷ್ಟದಲ್ಲಿರುವ ಮಿತ್ರಪಕ್ಷದ ಸ್ಥಿತಿ ಕುರಿತು ಸಮಸ್ಯೆ ಆಲಿಸಬೇಕು ಎನ್ನುವ ಕಾರಣಕ್ಕೆ ಸಾಂಕೇತಿಕವಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಓದಿ:ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ : ಬಿ ಎಸ್ ಯಡಿಯೂರಪ್ಪ - B S Yediyurappa