ಕರ್ನಾಟಕ

karnataka

ETV Bharat / state

ಗಗನಕ್ಕೇರಿದ ಟೊಮೆಟೊ ದರ: ಬೆಳಗಾವಿಯಲ್ಲಿ ಸೆಂಚುರಿ ಬಾರಿಸಿದ ಕಿಚನ್​ ಕ್ವೀನ್​! - Tomato Price Hike - TOMATO PRICE HIKE

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದ್ದು, ಬೆಳಗಾವಿಗೆ ಆವಕ ಕಡಿಮೆಯಾಗಿದೆ. ಸದ್ಯ ಕೆ.ಜಿ ದರ ₹100 ಗಡಿ ತಲುಪಿದೆ.

ಬೆಳಗಾವಿಯಲ್ಲಿ ಗಗನಕ್ಕೇರಿದ ಟೊಮೆಟೊ ದರ
ಬೆಳಗಾವಿಯಲ್ಲಿ ಗಗನಕ್ಕೇರಿದ ಟೊಮೆಟೊ ದರ (ETV Bharat)

By ETV Bharat Karnataka Team

Published : Jul 22, 2024, 11:08 AM IST

Updated : Jul 22, 2024, 1:09 PM IST

ಬೆಳಗಾವಿಯಲ್ಲಿ ಸೆಂಚುರಿ ಬಾರಿಸಿದ ಟೊಮೆಟೊ (ETV Bharat)

ಬೆಳಗಾವಿ: ದಿನನಿತ್ಯದ ಅಡುಗೆಗೆ ಟೊಮೆಟೊ ಬೇಕೇ ಬೇಕು. ಆದರೆ ಸದ್ಯ ಬೆಲೆ ಮಾತ್ರ ಕೇಳೋ ಹಾಗಿಲ್ಲ. ಗಡಿನಾಡು ಕುಂದಾನಗರಿಯಲ್ಲಿ ಈ ದರ ಶತಕದ ಗಡಿ ದಾಟಿದೆ.

ಮಹಾರಾಷ್ಟ್ರದ ಕರಾಡ ಸೇರಿ ವಿವಿಧ ಭಾಗಗಳ ರೈತರು ಈ ಸಮಯದಲ್ಲಿ ಅತೀ ಹೆಚ್ಚು ಟೊಮೆಟೊ ಬೆಳೆಯುತ್ತಾರೆ. ಬೆಳಗಾವಿ ಮಾರುಕಟ್ಟೆಗೆ ಇದೇ ಟೊಮೆಟೊ ಆಮದಾಗುತ್ತದೆ. ಆದರೆ, ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಬೆಳೆದಿದ್ದ ಟೊಮೆಟೊಗೆ ಹಾನಿಯಾಗಿದೆ. ಆದ್ದರಿಂದ ಬೆಳಗಾವಿಯಲ್ಲಿ ಆವಕ ಕೊರತೆ ಉಂಟಾಗಿ, ದರ ದಿಢೀರ್ ಹೆಚ್ಚಾಗಿದೆ. ಮೊದಲೇ ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಹೆಚ್ಚಾಗಿದೆ. ಇದರ ನಡುವೆ ಟೊಮೆಟೊ ಸೇರಿ ತರಕಾರಿಗಳ ದರ ಏರಿಕೆಯಾಗಿದ್ದು ಜನರನ್ನು ಕಂಗೆಡಿಸಿದೆ.

ಮೂರು ದಿನಗಳ ಹಿಂದೆ 1 ಕೆ.ಜಿಗೆ 50 ರೂ. ಇದ್ದ ಟೊಮೆಟೊ ಸದ್ಯ ಮಾರುಕಟ್ಟೆಯಲ್ಲಿ 1 ಕೆ.ಜಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರು ಖರೀದಿಸಬೇಕೋ? ಬೇಡವೋ? ಎಂದು ವಿಚಾರ ಮಾಡುವಂತಾಗಿದೆ.

ರವಿವಾರ ಪೇಟೆ ವ್ಯಾಪಾರಿ ಅಬ್ದುಲ್ ಮುತಲಿಫ್ ಡೋಣಿ ಎಂಬವರು 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದ ಟೊಮೆಟೊ ನಷ್ಟವಾಗಿದೆ. ಹಾಗಾಗಿ, ದರ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ 1 ಕೆ.ಜಿಗೆ 100 ರೂ.ಗೆ ಮಾರಿದ್ದೇವೆ. ಇದು ಹೀಗೆಯೇ ಮುಂದುವರಿದರೆ 15 ದಿನಗಳಲ್ಲಿ 150 ರೂ. ದಾಟಬಹುದು. ಮಾರ್ಕೆಟ್ ಯಾರ್ಡ್​ನಲ್ಲಿ ನಮಗೆ 90 ರೂ. ಬೀಳುತ್ತಿದೆ. ಹೊಸ ಟೊಮೆಟೊ ಬರುವವರೆಗೂ ಇದೇ ಪರಿಸ್ಥಿತಿ ಇರಲಿದೆ" ಎಂದು ಹೇಳಿದರು.

ಸಂತೆಗೆ ಬಂದಿದ್ದ ಗೃಹಿಣಿ ಅನಗಾ ಅವಟೆ ಮಾತನಾಡಿ, "ಟೊಮೆಟೊ‌ ಸೇರಿದಂತೆ ತರಕಾರಿ ಬೆಲೆ ಬಂಗಾರದಷ್ಟು ಏರಿದರೆ ಸಾಮಾನ್ಯ ಜನರಾದ ನಾವು ಹೇಗೆ ಬದುಕುವುದು? ಈ ಸರ್ಕಾರ ಬಂದ ಮೇಲೆ ಪೆಟ್ರೋಲ್, ಕಾಯಿಪಲ್ಲೆ ತುಟ್ಟಿಯಾಗಿದೆ. ಹಾಗಾಗಿ, ಇದೊಂದು ತುಟ್ಟಿ ಸರ್ಕಾರ. ಈ ಗ್ಯಾರಂಟಿಗಳಿಂದ ನಮಗೆ ಅನುಕೂಲವಾಗಿಲ್ಲ. ಜನ ದುಡಿಯೋದು ಬಿಡುತ್ತಾರೆ. ಅದನ್ನು ಬಿಟ್ಟು ಉದ್ಯೋಗದ ಗ್ಯಾರಂಟಿ ಕೊಡಲಿ, ಬೆಲೆ ಏರಿಕೆ ನಿಯಂತ್ರಿಸಲಿ" ಎಂದರು.

ಮತ್ತೋರ್ವ ಗೃಹಿಣಿ ಸ್ನೇಹಾ ಎಂಬವರು ಮಾತನಾಡಿ, "ಪ್ರತಿದಿನ ನಾವು ಮನೆಯಲ್ಲಿ ಟೊಮೆಟೊ ಹೆಚ್ಚಿಗೆ ಬಳಸುತ್ತಿದ್ದೆವು. ಆದರೆ, ಈಗ ಕೆ.ಜಿಗೆ 100 ರೂ. ಆಗಿದೆ. ಹಾಗಾಗಿ, ನಾನು ತೆಗೆದುಕೊಳ್ಳದೇ ವಾಪಸ್ ಬಂದೆ. ಟೊಮೆಟೊ‌ ಬದಲಿಗೆ ಹುಣಸೆ ಹಣ್ಣು ಉಪಯೋಗಿಸುತ್ತೇವೆ. ಅಗತ್ಯ ವಸ್ತುಗಳ ಬೆಲೆ ಬಹಳ ಹೆಚ್ಚಾಗಿದೆ. ಜೀವನ ನಡೆಸುವುದು ಕಷ್ಟವಾಗುತ್ತಿದೆ. ಏನಾದರು ಖರೀದಿಸಬೇಕು ಎಂದರೆ ವಿಚಾರ ಮಾಡುತ್ತಿದ್ದೇವೆ. ತುಟ್ಟಿ ಇಲ್ಲದ್ದನ್ನು ಮಾತ್ರ ಖರೀದಿಸುತ್ತಿದ್ದೇವೆ" ಎಂದು ಹೇಳಿದರು.

ಇದನ್ನೂ ಓದು:250 ರೋಗಿಗಳಿಗೆ ಓರ್ವ ವೈದ್ಯ! ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ ಕೇಳೋರಿಲ್ಲ - Community Health Center

Last Updated : Jul 22, 2024, 1:09 PM IST

ABOUT THE AUTHOR

...view details