ಬೆಂಗಳೂರು :ಸೈಬರ್ ವಂಚಕರ ಜಾಲದ ಕುರಿತು ಪೊಲೀಸರು ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರೂ ಅವುಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆ ಪೈಕಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ "ಡಿಜಿಟಲ್ ಅರೆಸ್ಟ್" ಮಾದರಿಯ ಪ್ರಕರಣಗಳಿಂದ ಅಮಾಯಕರು ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಂಚಕರಿಂದ ಕರೆಗಳು ಬಂದಾಗ ಭಯಗೊಳ್ಳುವ ಬದಲು, 'ತಾಳ್ಮೆ ವಹಿಸಿ - ಯೋಚಿಸಿ - ಕ್ರಮ ಕೈಗೊಳ್ಳಿ' ಎಂಬ ಸೂತ್ರವನ್ನ ವಿವರಿಸಿದ್ದರು. ಆದರೂ, ಸಹ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಕಮ್ಮಿಯಾಗಿಲ್ಲ. ಅದರಲ್ಲಿಯೂ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ.
2024ರ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, 109 ಕೋಟಿ ರೂ. ವಂಚಕರ ಪಾಲಾಗಿದೆ. ಆ ಪೈಕಿ ಬೆಂಗಳೂರಿನಲ್ಲಿ 480 ಪ್ರಕರಣಗಳು ವರದಿಯಾಗಿದ್ದು 42.4 ಕೊಟಿ ರೂ. ಹಣ ವಂಚಕರ ಪಾಲಾಗಿದೆ. ವಂಚಕರ ಪಾಲಾದ ಹಣದಲ್ಲಿ ಕೇವಲ 9 ಕೋಟಿ ರೂ. ಮಾತ್ರ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?ಮೊದಲು ಎಸ್ಎಂಎಸ್, ಇ-ಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸುವ ಅಥವಾ ಕರೆ ಮಾಡುವ ವಂಚಕರು, 'ನಿಮ್ಮ ನಂಬರ್ ಅಥವಾ ಯಾವುದೋ ದಾಖಲೆಗಳು ಮಾದಕ ಸರಬರಾಜು ಜಾಲ, ಅಕ್ರಮ ಹಣ ವರ್ಗಾವಣೆ, ಅಶ್ಲೀಲ ವಿಡಿಯೋಗಳ ಸೃಷ್ಟಿಸುವ ಜಾಲದಲ್ಲಿ ಬಳಕೆಯಾಗಿವೆ' ಎಂದು ಬೆದರಿಸುತ್ತಾರೆ. ನಂತರ 'ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ' ಎಂದು ನಿರ್ದಿಷ್ಟ ಮೊಬೈಲ್ ನಂಬರ್ ನೀಡುತ್ತಾರೆ. ಬಳಿಕ ಮಾತನಾಡುವ ವ್ಯಕ್ತಿ ತಾನು ಮುಂಬೈ ಪೊಲೀಸ್, ಸಿಬಿಐ, ಇ.ಡಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಎಂದು ಪರಿಚಯಿಸಿಕೊಂಡು ವಾಟ್ಸ್ಆ್ಯಪ್, ಸ್ಕೈಪ್ ಮತ್ತಿತರ ಆ್ಯಪ್‌ನ ಮೂಲಕ ವಿಡಿಯೋ ಕರೆ ಮಾಡಲು ಸೂಚಿಸುತ್ತಾನೆ. ನೀವು ನಂಬುವಂತೆಯೇ ಪೊಲೀಸ್ ಧಿರಿಸು ಅಥವಾ ತನಿಖಾ ಸಂಸ್ಥೆಗಳ ಕಚೇರಿಯಂತೆಯೇ ಕಾಣುವ ವ್ಯವಸ್ಥೆ ಮಾಡಿಟ್ಟುಕೊಂಡಿರುವ ವಂಚಕ ವಿಡಿಯೋ ಕರೆ ಸ್ವೀಕರಿಸಿ ಮಾತನಾಡಲಾರಂಭಿಸುತ್ತಾನೆ. ಕರೆಯಲ್ಲಿ ನಿಮ್ಮ ವಿರುದ್ಧ ಗಂಭೀರ ಆರೋಪ ಮಾಡುವ ವಂಚಕ, ನಕಲಿ ಅರೆಸ್ಟ್ ವಾರೆಂಟ್ ಫೋಟೋ ಕಳಿಸಿ ನಿಮ್ಮನ್ನ ಬಂಧಿಸಬೇಕಾಗಿದೆ. ಆದ್ದರಿಂದ "ಡಿಜಿಟಲ್ ಅರೆಸ್ಟ್" ಮಾಡುತ್ತಿದ್ದೇವೆ ಎಂದು ಇತರೆಡೆ ನಿಮ್ಮ ಗಮನ ಹೋಗದಂತೆ ನಿಮ್ಮನ್ನ ವಿಡಿಯೋ ಕರೆಯಲ್ಲಿಯೇ ಹಾಜರಿರುವಂತೆ (ಡಿಜಿಟಲ್ ಅರೆಸ್ಟ್) ಮಾಡುತ್ತಾನೆ. ನಂತರ ತನಿಖೆ ನಡೆಸಲಾಗುತ್ತಿದೆ ನಿಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡಲು ಹಣ ನೀಡಬೇಕಾಗುತ್ತದೆ ಎಂದು ಬೇಡಿಕೆಯಿಡುತ್ತಾನೆ.