ರಾಮನಗರ:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ.
ಯೋಗೇಶ್ವರ್ ಪಕ್ಷಾಂತರದ ನಂತರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಸಂಘಟನೆ ಮಾಡಿದ್ದೇ ಇಲ್ಲ. ಮೂರು ಸಾರ್ವತ್ರಿಕ ಚುನಾವಣೆ, ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚನ್ನಪಟ್ಟಣ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಾರೆ. ಇದಕ್ಕೆ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಡೆದ ಮತಗಳು.
ಡಿಸಿಎಂ ಡಿ.ಕೆ. ಶಿವಕುಮಾರ್ ಲೆಕ್ಕಾಚಾರ ಏನು: ಇದೇ ಮೊದಲ ಬಾರಿಗೆ ಯಾರ ಬೆಂಬಲವೂ ಇಲ್ಲದೆ ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ 85 ಸಾವಿರ ಮತಗಳು ಬಂದಿವೆ. ಮೈತ್ರಿ ಕೂಟದ ಭದ್ರ ಕೋಟೆ ಎನಿಸಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ 60 ಸಾವಿರ ಮತಗಳನ್ನು ಗಳಿಸಿದರೂ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದ ಡಿಕೆ ಸಹೋದರರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದರೂ, ಚನ್ನಪಟ್ಟಣದಲ್ಲಿ ಇವರ ನಿರೀಕ್ಷೆ ಮೀರಿ ಮತಗಳು ಬಂದಿದ್ದವು.
ಈ ಫಲಿತಾಂಶ ಕಾಂಗ್ರೆಸ್ ಪಾಳೆಯದಲ್ಲಿ ಕ್ಷೇತ್ರವನ್ನು ಗೆಲ್ಲಬಹುದು ಎಂಬ ವಿಶ್ವಾಸಕ್ಕೆ ಕಾರಣವಾಗಿದೆ. ಹಾಗೆಯೇ 2023ರ ವಿಧಾನಸಭಾ ಚುನಾವಣೆಯಲ್ಲಿ 15 ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ 85 ಸಾವಿರ ಮತಗಳನ್ನು ಪಡೆಯುವುದರ ಹಿಂದೆ ಡಿಕೆ ಸಹೋದರರ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿದೆ. ಇನ್ನೊಂದಷ್ಟು ಪರಿಶ್ರಮವನ್ನು ಹಾಕಿದರೆ ಉಪಚುನಾವಣೆಯಲ್ಲಿ ಗೆಲುವು ನಮ್ಮದೇ ಎಂಬ ಹುಮ್ಮಸ್ಸು ಕಾಂಗ್ರೆಸ್‍ನಲ್ಲಿ ಮೂಡಿದೆ.