ತಮ್ಮ ಪತ್ನಿಗೆ ಅಕ್ರಮವಾಗಿ ಮುಡಾ ನಿವೇಶನ ವರ್ಗಾವಣೆ ಆರೋಪ (ETV Bharat) ಬೆಂಗಳೂರು:''ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಕಾನೂನು ಪ್ರಕಾರ ತಮಗೆ ಜಮೀನು ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ'' ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಧರ್ಮ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಮುಡಾ ನಿವೇಶನ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಬಿಜೆಪಿ ಆಡಳಿತಾವಧಿಯಲ್ಲಿ ಕೊಟ್ಟಿರುವ ನಿವೇಶನವಾಗಿದೆ. ರಿಂಗ್ ರೋಡ್ ಕೆಸರೆ ಪಕ್ಕದಲ್ಲಿ ಆ ಜಮೀನು ಇದೆ. 3.16 ಎಕರೆ ಜಮೀನು ಅದಾಗಿತ್ತು. ಮೂಲತಃ ಅದನ್ನು ನನ್ನ ಬಾಮೈದ ಮಲ್ಲಿಕಾರ್ಜುನ್ ಖರೀದಿ ಮಾಡಿದ್ದಾನೆ. ಬಳಿಕ ಅದನ್ನು ಆತ ನನ್ನ ಪತ್ನಿಗೇ ದಾನಪತ್ರವಾಗಿ ಕೊಟ್ಟಿದ್ದಾನೆ'' ಎಂದು ವಿವರಿಸಿದರು.
ಇದನ್ನೂ ಓದಿ:ಮುಡಾ ಹಗರಣ ಸಿಬಿಐಗೆ ವಹಿಸಿ: ಸಿ.ಟಿ.ರವಿ ಆಗ್ರಹ - C T Ravi
''3.16 ಎಕರೆ ಜಮೀನನ್ನು ಸ್ವಾಧೀನ ಮಾಡಿಲ್ಲ. ಆದರೆ, ಮುಡಾದವರು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಜಮೀನನ್ನು ನಿವೇಶನ ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದಂತೆ ಆಯಿತು. ನಾವು ನಮ್ಮ ಜಮೀನನ್ನು ಕಳೆದುಕೊಳ್ಳಬೇಕಾ? ನಿವೇಶನ ಮಾಡಿ ಹಂಚಿದ ಮೇಲೆ ನಮಗೆ ಕಾನೂನು ಪ್ರಕಾರ ನಿವೇಶನ ಕೊಡಬೇಕು. ಕಾನೂನು ಪ್ರಕಾರ ಮುಡಾ ನಮಗೆ 50:50 ಅನುಪಾತದಲ್ಲಿ ಜಮೀನು ಕೊಡಲು ಒಪ್ಪಿದರು'' ಎಂದು ತಿಳಿಸಿದರು.
ಇದನ್ನೂ ಓದಿ:ಡಾ.ಯತೀಂದ್ರ ಆ್ಯಂಡ್ ಟೀಂ ಸಹಕಾರದಿಂದ ಮುಡಾದಲ್ಲಿ 5 ಸಾವಿರ ಕೋಟಿ ರೂ. ಅವ್ಯವಹಾರ: ಹೆಚ್. ವಿಶ್ವನಾಥ್ - H Vishwanath
''ನಾನು ಅಧಿಕಾರದಲ್ಲಿ ಇರುವಾಗ ಆ ಜಮೀನನ್ನು ತೆಗೆದುಕೊಳ್ಳಲು ಹೋಗಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ 50:50 ಅನುಪಾತದಲ್ಲಿ ಜಮೀನು ಕೊಡಬೇಕು ಎಂದು ಮಾಡಲಾಗಿತ್ತು. ನಿಯಮದ ಪ್ರಕಾರ ನಮಗೆ ಜಮೀನು ಕೊಡಿ ಅಂತ ಬಿಜೆಪಿ ಅಧಿಕಾರದಲ್ಲಿದ್ದಾಗ ಕೋರಿದ್ದೆವು. ಆವಾಗ ಅವರು ನಮಗೆ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಮುಡಾ ಹಗರಣ: ಕಮಿಷನರ್ ಎತ್ತಂಗಡಿ, ತನಿಖೆಗೆ ಐಎಎಸ್ ಅಧಿಕಾರಿಗಳ ನೇಮಕ - Muda Scam