ಹುಬ್ಬಳ್ಳಿ:ಅವಳಿ ನಗರಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕು ಎಂಬ ದಶಕಗಳ ಕನಸು ಈಗ ಈಡೇರಿದಂತಾಗಿದೆ. ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಈಗ ಪರಸ್ಪರ ಸ್ವತಂತ್ರವಾಗಲಿವೆ. ಇದರಿಂದ ಬೆಂಗಳೂರು ಮಾದರಿ ಬೃಹತ್ ಮಹಾನಗರ ಪಾಲಿಕೆ ಕನಸು ಛಿದ್ರವಾಗಲಿದೆ. ಪ್ರತ್ಯೇಕ ಮಹಾನಗರ ಪಾಲಿಕೆ ಹಲವು ಸಾಧಕ- ಬಾಧಕಗಳನ್ನು ಒಳಗೊಂಡಿದೆ.
ದಶಕಗಳ ಹೋರಾಟಕ್ಕೆ ಸಂದ ಫಲ: ಧಾರವಾಡ ಹೊಸ ಪಾಲಿಕೆ ರಚನೆ 24 ವರ್ಷಗಳಿಂದ ಕೇಳಿ ಬರುತ್ತಿದ್ದ ಪ್ರತ್ಯೇಕ ಪಾಲಿಕೆ ಕೂಗು, ಅನೇಕ ಹೋರಾಟಗಳು, ಲಕ್ಷಾಂತರ ಜನರ ಸಹಿ ಸಂಗ್ರಹದ ಪ್ರತಿಫಲವಾಗಿದೆ.
ಪ್ರತ್ಯೇಕ ಕೂಗಿಗೆ ಪ್ರಮುಖ ಕಾರಣಗಳೇನು?: ಅಭಿವೃದ್ಧಿ ಮತ್ತು ಅನುದಾನದ ದೃಷ್ಟಿಯಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಾಗಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಿತ್ತು. ಇದಕ್ಕೆ ಇನ್ನೊಂದು ಪ್ರಮುಖ ಕಾರಣ ಎಂದರೆ ಧಾರವಾಡ ನಾಗರಿಕರಿಗೆ ಆಡಳಿತ ದೂರವಿತ್ತು. ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳೇ ಇರಲಿಲ್ಲ. ಮಂಗಳವಾರ ಮತ್ತು ಶುಕ್ರವಾರ ಮಾತ್ರ ಇಲ್ಲಿ ಅಧಿಕಾರಿಗಳು ಲಭ್ಯ ಇರುತ್ತಿದ್ದರು. ಅದೂ ಕಾಟಾಚಾರಕ್ಕೆ ಎನ್ನುವಂತಿತ್ತು. ಇನ್ನು ಕೇಂದ್ರ - ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಎರಡು ಮಹಾನಗರಗಳ ಅಭಿವೃದ್ಧಿಯಾಗಬೇಕಿತ್ತು. ಅನುದಾನ ಸಾಲುತ್ತಿರಲಿಲ್ಲ. 5 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಮಹಾನಗರ ಪಾಲಿಕೆಗೆ 500 ಕೋಟಿ ರೂ. ಬಂದರೆ 9 ಲಕ್ಷ ಜನಸಂಖ್ಯೆ ಇರುವ ಹುಬ್ಬಳ್ಳಿ - ಧಾರವಾಡಕ್ಕೂ 500 ಕೋಟಿ ರೂ. ಬರುತ್ತಿತ್ತು. ಹೀಗಾಗಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಆಗ್ರಹ ಕೇಳಿ ಬಂದಿತ್ತು.
ಗಡಿ ಗುರುತಿಸಲು ಸಮಸ್ಯೆ:ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 82 ವಾರ್ಡ್‌ಗಳಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆಗೆ 1 ರಿಂದ 26 ವಾರ್ಡ್ ವರೆಗೆ ಅಂದರೆ ನವನಗರ ಸಮೀಪದವರೆಗಿನ (ಧಾರವಾಡ ತಾಲೂಕು ವ್ಯಾಪ್ತಿಯವರೆಗೆ) ವಾರ್ಡ್‌ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. 27 ರಿಂದ 82ನೇ ವಾರ್ಡ್‌ಗಳು ಹುಬ್ಬಳ್ಳಿ ಪಾಲಿಕೆ ವ್ಯಾಪ್ತಿಗೆ ಬರಲಿವೆ. ಈ ನಿಟ್ಟಿನಲ್ಲಿ ಗಡಿ ಗುರುತಿಸಬೇಕಾಗಿದೆ. ಇಲ್ಲಿವರೆಗೆ ಒಂದೇ ಮಹಾನಗರ ಪಾಲಿಕೆ ಆಗಿದ್ದರಿಂದ ವಾರ್ಡ್‌ಗಳ ಗಡಿ ಸಮಸ್ಯೆ ಆಗಿರಲಿಲ್ಲ. ಇದೀಗ ಹೊಸ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಒಂದೇ ವಾರ್ಡ್ 2 ಪಾಲಿಕೆ ವ್ಯಾಪ್ತಿಗೆ ಬರುವಂತಿದ್ದರೆ ಅದು ಯಾವ ಕಡೆ ಸೇರಬೇಕು ಎಂಬುದನ್ನು ನಿರ್ಧರಿಬೇಕಾಗುತ್ತದೆ. ಸದ್ಯ 12 ವಲಯ ಕಚೇರಿಗಳಿದ್ದು, ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಧಾರವಾಡ ವ್ಯಾಪ್ತಿಗೆ 4, ಹುಬ್ಬಳ್ಳಿ ವ್ಯಾಪ್ತಿಗೆ 8 ವಲಯ ಕಚೇರಿಗಳು ಬರಲಿವೆ.
ಆಸ್ತಿ ಹಂಚಿಕೆ ದೊಡ್ಡ ಸಮಸ್ಯೆ:ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಸ್ತಿಗಳ ಹಂಚಿಕೆಯಾಗಬೇಕು. ದಾಖಲೆಗಳ ಪ್ರಕಾರ ಹುಬ್ಬಳ್ಳಿ - ಧಾರವಾಡ ಮಹಾನಗರ ವ್ಯಾಪ್ತಿ 202 ಚದರ ಕಿ.ಮೀ ಇದ್ದರೂ ವಾಸ್ತವಿಕವಾಗಿ ಸುಮಾರು 450 ಚದರ ಕಿ.ಮೀ ವ್ಯಾಪ್ತಿವರೆಗೆ ಬೆಳೆದಿದೆ. ಇದರಲ್ಲಿ ಯಾರಿಗೆ ಎಷ್ಟು ಪಾಲು ಎಂದು ಹಂಚಿಕೆ ಆಗಬೇಕಾಗುತ್ತದೆ . ಉದ್ಯಮ, ಶಿಕ್ಷಣ ಇನ್ನಿತರ ಆಸ್ತಿ ಹಂಚಿಕೆ ಆಗಬೇಕಾಗುತ್ತದೆ. ಶಿಕ್ಷಣದ ವಿಚಾರಕ್ಕೆ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ, ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ, ಐಐಐಟಿ ಧಾರವಾಡ ಪಾಲಿಕೆ ವ್ಯಾಪ್ತಿಗೆ ಸೇರಲಿವೆ.
ನವನಗರ ಹುಬ್ಬಳ್ಳಿ ವ್ಯಾಪ್ತಿಯಲ್ಲಿಯೇ ಉಳಿದರೆ ಮಾತ್ರ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಪಾಲಿಕೆಗೆ ಸೇರಲಿದೆ. ಹೈಕೋರ್ಟ್ ಪೀಠ, ಡಿಮಾನ್ಸ್ ಆಸ್ಪತ್ರೆ ಬೇಲೂರು. ಮುಮ್ಮಿಗಟ್ಟಿ, ಲಕಮನಹಳ್ಳಿ ರಾಯಾಪುರ ಕೈಗಾರಿಕಾ ಪ್ರದೇಶಗಳು ಧಾರವಾಡ ಪಾಲಿಕೆ ವ್ಯಾಪ್ತಿಗೆ ಸೇರಲಿವೆ. ಗಾಮನಗಟ್ಟಿ ಯಾವ ಪಾಲಿಕೆಗೆ ಸೇರಬೇಕೆಂದು ನಿರ್ಧಾರವಾಗಬೇಕಾಗಿದೆ. ತಾರಿಹಾಳ, ಗೋಕುಲ, ರಾಯನಾಳ ಕೈಗಾರಿಕೆ ಪ್ರದೇಶ ಹುಬ್ಬಳ್ಳಿ ವ್ಯಾಪ್ತಿಗೆ ಬರಲಿದೆ.
ಪ್ರತ್ಯೇಕ ಕಚೇರಿ ಸ್ಥಾಪನೆ, ಅಧಿಕಾರಿಗಳ ನೇಮಕ:ಪ್ರತ್ಯೇಕ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಧಾರವಾಡಕ್ಕೆ ಪ್ರತ್ಯೇಕ ಮಹಾಪೌರ, ಉಪ ಮಹಾಪೌರ, ಆಯುಕ್ತ, ಜಂಟಿ ಆಯುಕ್ತರ ನೇಮಕ ಜತೆಗೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಬೇಕಾಗುತ್ತದೆ. ಮಹಾನಗರ ಪಾಲಿಕೆ ಕಚೇರಿಯ ಕೆಲವೊಂದು ಇಲಾಖೆಗಳು ಧಾರವಾಡದಲ್ಲಿಯೇ ಇವೆಯಾದರೂ, ಮಾನವ ಸಂಪನ್ಮೂಲ ವಿಭಾಗ, ಕಂದಾಯ ಸೇರಿದಂತೆ ಇನ್ನಿತರ ವಿಭಾಗಗಳ ಮುಖ್ಯ ಕಚೇರಿಗಳು ಹುಬ್ಬಳ್ಳಿಯಲ್ಲಿದ್ದು, ಇದೀಗ ಪ್ರತ್ಯೇಕ ಮುಖ್ಯ ಕಚೇರಿಗಳು ಧಾರವಾಡದಲ್ಲೂ ಆರಂಭವಾಗಲಿವೆ.