ಬೆಂಗಳೂರು:ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ಹಾಗೂ ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಲ್ಯಾಂಡ್ ಬೀಟ್ ಯೋಜನೆ ಜಾರಿಗೆ ಬಂದಿದೆ. ಸರ್ಕಾರಿ ಜಮೀನು ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಅಥವಾ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸರ್ಕಾರಿ ಯೋಜನೆಗಳಿಗೆ ಜಮೀನೇ ಸಿಗದಂತೆ ಕೆಲವೊಂದು ಗ್ರಾಮ ಮತ್ತು ನಗರಗಳಲ್ಲಿ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೆ ಕಂದಾಯ ಇಲಾಖೆ 'ಲ್ಯಾಂಡ್ ಬೀಟ್' ಯೋಜನೆಗೆ ಜಾರಿಗೆ ತಂದಿದೆ.
ಆ್ಯಪ್ ಮೂಲಕ ಲೆಕ್ಕಾಚಾರ:ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ರಾಜ್ಯದ ಎಲ್ಲೆಲ್ಲಿ ಎಷ್ಟೆಷ್ಟು ಸರ್ಕಾರಿ ಜಾಗವಿದೆ ಎಂಬುದನ್ನು ಡಿಜಿಟಲೀಕರಣ ಮಾಡಿ ಒಂದು ಆ್ಯಪ್ ಮಾಡಲಾಗಿದೆ. ಕುಳಿತಲ್ಲೇ ಹತ್ತು ಸೆಕೆಂಡುಗಳಲ್ಲಿ ಯಾವ ಗ್ರಾಮಗದಲ್ಲಿ, ಯಾವ ತಾಲ್ಲೂಕಿನಲ್ಲಿ, ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಸರ್ಕಾರಿ ಜಮೀನು ಇದೆ ಎಂಬುದನ್ನು ಹೇಳಬಹುದು.
ಜಿಪಿಎಸ್ ಬಳಸಿಕೊಂಡು ಪ್ರತಿ ಆಸ್ತಿಯನ್ನು ಆ್ಯಪ್‌ನಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದೆ. ಸರ್ಕಾರಿ ಜಮೀನು ಒತ್ತುವರಿ ಪರಿಶೀಲಿಸಲು ಕಂದಾಯ ಅಧಿಕಾರಿಗಳು ಪ್ರತಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಯಾವುದೇ ಸಮಸ್ಯೆಗಳನ್ನು ನೇರವಾಗಿ ಆ್ಯಪ್ ಮೂಲಕ ವರದಿ ಮಾಡುತ್ತಾರೆ. ನಂತರ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದುವರೆಗೂ ಗ್ರಾಮ ಆಡಳಿತ ಅಧಿಕಾರಿಗಳು 6 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆ್ಯಪ್‌ನಲ್ಲಿ ಅಪ್ಡೇಟ್ ಮಾಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಶ್ರಮದಿಂದಾಗಿ ಪ್ರತಿ ಗ್ರಾಮಗಳ ಸರ್ಕಾರಿ ಆಸ್ತಿಗಳ ವಿವರವಾದ ಡಿಜಿಟಲ್ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಸಂಗ್ರಹವಾಗಿವೆ.
ಹೊಸ ಲೇಔಟ್, ಭೂ ಮಾರಾಟ ಇನ್ನಿತರ ಸಂದರ್ಭಗಳಲ್ಲಿ ಜಮೀನನ್ನು ಅಮಾಯಕರಿಗೆ ಮಾರಾಟ ಮಾಡಿ ಹಣ ಮಾಡುವ ದಂಧೆಕೋರರು ಇದ್ದಾರೆ. ಅಲ್ಲದೆ, ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುವ ಕೆಲಸವೂ ನಡೆಯುತ್ತಿದೆ. ಇಂತಹ ಅದೆಷ್ಟೋ ಪ್ರಕರಣಗಳು ಬಹುಕಾಲದವರೆಗೂ ಬೆಳಕಿಗೆ ಬರುವುದೇ ಇಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಲ್ಯಾಂಡ್ ಬೀಟ್ ಪ್ರೋಗ್ರಾಂನಿಂದ ಸಾಧ್ಯವಾಗುತ್ತದೆ. ಈ ಆಸ್ತಿಗಳು ಸುರಕ್ಷಿತವಾಗಿರಲು ಆಗಾಗ್ಗೆ ಸ್ಥಳ ಪರಿಶೀಲನೆ ನಡೆಸುವಂತೆ ಆಯಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
91 ಸಾವಿರ ಜಮೀನುಗಳು ಒತ್ತುವರಿ:ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು ಸಮೀಕ್ಷೆ ನಡೆಸಲಾಗಿದೆ. ಒಟ್ಟು 91 ಸಾವಿರ ಜಮೀನುಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೆಯರ್‌ಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರ ಇಲಾಖೆಯವರೂ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಪ್ರತಿ ಊರಿಗೆ ಸರ್ಕಾರಿ ಜಮೀನು ಅತ್ಯಗತ್ಯವಾಗಿದೆ. ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ಅಂದರೆ ಶಾಲೆ, ಕಾಲೇಜು, ಮೈದಾನ, ಹಾಸ್ಟೆಲ್, ಆಸ್ಪತ್ರೆ, ಗ್ರಂಥಾಲಯ, ಸ್ಮಶಾನ ಇನ್ನಿತರ ಸಾರ್ವಜನಿಕ ಉಪಯೋಗಕ್ಕೆ ಯೋಜನೆ ಕೈಗೊಳ್ಳಲು ಅನುಕೂಲವಾಗಲಿದೆ. ಸಾಕಷ್ಟು ಹಳ್ಳಿಗಳಲ್ಲಿ ಜಮೀನಿನ ಭೂಮಿ ಕೊರತೆಯಿಂದಾಗಿ ಕೆಲ ಯೋಜನೆಗಳು ಕೈತಪ್ಪಿ ಹೋಗುವ ಸಾಧ್ಯತೆಗಳು ಇರಲಿವೆ. ಅಲ್ಲದೆ, ಸ್ಮಶಾನಕ್ಕೂ ಖಾಸಗಿ ಜಮೀನು ಖರೀದಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ, ಸರ್ಕಾರಿ ಭೂಮಿ ರಕ್ಷಣೆ ಮಾಡುವುದು ಸ್ಥಳೀಯರ ಜವಾಬ್ದಾರಿ ಸಹ ಇದೆ ಎನ್ನುತ್ತಾರೆ ಅಧಿಕಾರಿಗಳು.
ಕಂದಾಯ ಸಚಿವರ ಮಾತು:"ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಲ್ಯಾಂಡ್ ಬೀಟ್ (ಜಮೀನು ಗಸ್ತು) ಯೋಜನೆಯನ್ನು ಜಾರಿ ಮಾಡಲಾಗಿದೆ. ರಾಜ್ಯದಲ್ಲಿ 14.5 ಲಕ್ಷ ಸರ್ಕಾರಿ ಜಮೀನು ಇದ್ದು, ಸರ್ಕಾರಿ ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ಒಳಗೊಂಡ (ಸರ್ವೆ ಸಂಖ್ಯೆ, ಭೌಗೋಳಿಕ ಗಡಿ ಸೇರಿದಂತೆ) ಆ್ಯಪ್ಸಿದ್ದಪಡಿಸಿದ್ದೇವೆ. ಅದೇ ರೀತಿ ಜಮೀನಿನ ಆಕಾರದ ಮಾಹಿತಿಯೂ ಇದರಲ್ಲಿದೆ. ಈ ಲ್ಯಾಂಡ್ ಬೀಟ್ ಯೋಜನೆಯಲ್ಲಿ ಪ್ರತಿ ಗ್ರಾಮ ಲೆಕ್ಕಿಗರು ಆಯಾ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನುಗಳಿಗೆ ಭೇಟಿ ಕೊಡಬೇಕು. ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಆ ಬಗ್ಗೆ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಬೇಕು. ತಹಶೀಲ್ದಾರ್ ಒತ್ತುವರಿಯನ್ನು ತೆರವುಗೊಳಿಸುತ್ತಾರೆ. ಇದರಿಂದ ಸರ್ಕಾರಿ ಜಮೀನಿನ ರಕ್ಷಣೆ ಮಾಡುವುದರ ಜೊತೆಗೆ ಒತ್ತುವರಿಯನ್ನು ತೆರವುಗೊಳಿಸಲು ಸಾಧ್ಯವಾಗುತ್ತಿದೆ" ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 91,000 ಎಕರೆ ಜಮೀನು ಒತ್ತುವರಿ: ಲ್ಯಾಂಡ್ ಬೀಟ್ ತಂತ್ರಾಂಶದಿಂದ ಪತ್ತೆ - CM Siddaramaiah Meeting