ಕರ್ನಾಟಕ

karnataka

ETV Bharat / state

ಬಾಣಂತಿಯರ ಸಾವು ಪ್ರಕರಣ: ಐವಿ ದ್ರಾವಣ ಉತ್ಪಾದಿಸದಂತೆ ಪ.ಬಂಗಾಳದ ಕಂಪನಿಗೆ ನಿರ್ಬಂಧ - ಸಚಿವ ದಿನೇಶ್ ಗುಂಡೂರಾವ್ - MATERNAL DEATH CASE

ಉತ್ಪಾದನೆಯಲ್ಲಿ ಗುಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂಬ ವರದಿ ಆಧರಿಸಿ ಪಶ್ವಿಮ ಬಂಗಾಳದ ಕಂಪನಿಗೆ ಐವಿ ದ್ರಾವಣ ಉತ್ಪಾದಿಸದಂತೆ ನಿರ್ಬಂಧ ಹೇರಲಾಗಿದೆ ಎಂದು ವಿಧಾನ ಪರಿಷತ್​ನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಸಚಿವ ದಿನೇಶ್ ಗುಂಡೂರಾವ್, ಬಾಣಂತಿಯರ ಸಾವು ಪ್ರಕರಣ
ವಿಧಾನ ಪರಿಷತ್ತಿನ ಕಲಾಪದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತು (ETV Bharat)

By ETV Bharat Karnataka Team

Published : 8 hours ago

ಬೆಂಗಳೂರು/ಬೆಳಗಾವಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದ್ದೆಂದು ಹೇಳಲಾಗಿದ್ದ ಐವಿ ದ್ರಾವಣ ಉತ್ಪಾದಿಸದಂತೆ ಪಶ್ಚಿಮ ಬಂಗಾಳ ಕಂಪನಿಗೆ ನಿರ್ಬಂಧ ಹೇರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ತಿನ ಕಲಾಪದಲ್ಲಿ ಇಂದು ಬಾಣಂತಿಯರ ಸಾವುಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾಹಿತಿ ನೀಡಿದ ಸಚಿವರು, ಈ ವಿಷಯವನ್ನು ಸದನದ ಗಮನಕ್ಕೆ ತಂದರು.

ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾಳದ ಕಂಪನಿಯನ್ನು ಈಗಾಗಲೇ ರಾಜ್ಯ ಸರ್ಕಾರ 'ಬ್ಲಾಕ್ ಲಿಸ್ಟ್'ಗೆ ಸೇರಿಸಿದೆ. ಪ್ರಕರಣದ ತನಿಖೆ ಅಂತ್ಯಗೊಳ್ಳುವವರೆಗೆ ವಿವಾದಾತ್ಮಕವಾಗಿರುವ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಚಿವರು ತಿಳಿಸಿದರು.

ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿರುವ ಲೋಪದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ತಜ್ಞ ವೈದ್ಯರ ತಂಡ ರಚಿಸಿ ಪರಿಶೀಲಿಸಲಾಗಿತ್ತು. ತಜ್ಞರ ತಂಡ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು. ತಜ್ಞರ ತಂಡದ ವರದಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಂಪನಿ ಪೂರೈಸಿದ್ದ ಎಲ್ಲ ಬ್ಯಾಚ್​​ಗಳ ದ್ರಾವಣವನ್ನು ತಡೆಹಿಡಿದು, ಟೆಸ್ಟಿಂಗ್ ಮಾಡಿಸಲಾಗಿದೆ. ಅಲ್ಲದೇ ಉತ್ತಮ ಗುಣಮಟ್ಟ ಹೊಂದಿರದ 9 ಬ್ಯಾಚ್​​ಗಳ ದ್ರಾವಣ ಪೂರೈಕೆ ಹಿನ್ನೆಲೆಯಲ್ಲಿ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳ ಕಂಪನಿ ಪೂರೈಸಿದ್ದ 22 ಬ್ಯಾಚ್​ಗಳು ಗುಣಮಟ್ಟ ಹೊಂದಿಲ್ಲ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರೂ, ಸೆಂಟ್ರಲ್ ಡ್ರಗ್ ಲ್ಯಾಬ್ ಇದರಲ್ಲಿ ನಾಲ್ಕು ಬ್ಯಾಚ್​​ಗಳು ಗುಣಮಟ್ಟ ಹೊಂದಿವೆ ಎಂದು ವರದಿ ನೀಡಿತ್ತು. ಈ ಬಗ್ಗೆ ಕೇಂದ್ರ ಡ್ರಗ್ ಕಂಟ್ರೋಲರ್​​ಗೆ ಪತ್ರ ಬರೆದು, ಬಾಣಂತಿಯರ ಸಾವಿನ ಪ್ರಕರಣ ಉಲ್ಲೇಖಿಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಕೇಂದ್ರ ಡ್ರಗ್ ಕಂಟ್ರೋಲರ್ ಸೇರಿದಂತೆ ರಾಜ್ಯ ಹಾಗೂ ಪಶ್ಚಿಮ ಬಂಗಾಳದ ಡ್ರಗ್ ಕಂಟ್ರೋಲರ್​​ಗಳು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಉತ್ಪಾದನೆಯಲ್ಲಿ ಗುಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂದು ವರದಿ ನೀಡಿದ್ದಾರೆ. ಅಲ್ಲದೇ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಪಶ್ಚಿಮ ಬಂಗಾ ಕಂಪನಿ ಮೇಲೆ ನಿರ್ಬಂಧ ಕೂಡ ಹೇರಲಾಗಿದೆ. ಇದು ಒಂದು ಉತ್ತಮ ಬೆಳವಣಿಗೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.

ಸಾವಿಗೀಡಾದ ಬಾಣಂತಿಯರಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದ್ದು, ಕಂಪನಿಯಿಂದ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ ವ್ಯವಸ್ಥೆಯಲ್ಲಿ ಲೋಪದೋಷಗಳಿರುವುದು ನಿಜ. ದೇಶದಲ್ಲಿಯೇ ಡ್ರಗ್ ಲಾಬಿ ಜೋರಾಗಿದೆ. ಇದನ್ನು ನಿಯಂತ್ರಣ ಮಾಡಲು ನಮ್ಮ ಕೇಂದ್ರದ ಕಾಯ್ದೆಗಳು ಸಡಿಲವಾಗಿವೆ. ರಾಜ್ಯ ಸರ್ಕಾರ ತನ್ನ ಹಂತದಲ್ಲಿ ವ್ಯವಸ್ಥೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯನ್ನು ವಿಲೀನಗೊಳಿಸಲಾಗಿದೆ. ಇದರಿಂದ ಔಷಧ ನಿಯಂತ್ರಣ ಇಲಾಖೆಯು ಐಎಎಸ್ ಮಟ್ಟದ ಅಧಿಕಾರಿಯ ಮೇಲ್ವಿಚಾರಣೆಗೆ ಒಳಪಟ್ಟಿದೆ ಎಂದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ ಬಾಣಂತಿಯರ ಪ್ರಕರಣ ಅಷ್ಟೇ ಅಲ್ಲ. ರಾಜ್ಯದಲ್ಲಿ ನಡೆದ ಪ್ರತಿಯೊಂದು ತಾಯಿ ಮಗುವಿನ ಸಾವು ಪ್ರಕರಣ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಎಲ್ಲ ಪ್ರಕರಣಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ಸಾವಿಗೀಡಾದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಜವಾಬ್ದಾರಿ. ಲೋಪದೋಷಗಳನ್ನು ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್

ABOUT THE AUTHOR

...view details