ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಬೆಂಗಳೂರು:ನನ್ನ ವಿರುದ್ಧ ಮಹಿಳೆ ದೂರು ನೀಡಿದ್ದು, ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಕಾನೂನಿನ ರೀತಿ ಇದನ್ನು ಯಾವ ರೀತಿ ಎದುರಿಸಬೇಕೋ ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ನಾನು ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾರೋ ಮಹಿಳೆ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಒಂದೂವರೆ ತಿಂಗಳ ಹಿಂದೆ ತಾಯಿ ಮಗಳು ಕಣ್ಣೀರು ಹಾಕುತ್ತಿದ್ದರು. ಅವರು ಸಾಕಷ್ಟು ಬಾರಿ ಬಂದಿದ್ದರೂ ಹತ್ತಿರ ಸೇರಿಸಿರಲಿಲ್ಲ. ಆದರೆ ಅಳುವುದನ್ನು ನೋಡಿ ಒಮ್ಮೆ ಒಳಗಡೆ ಕರೆಸಿ ಕೂರಿಸಿ ಸಮಸ್ಯೆಯನ್ನ ಆಲಿಸಿದೆ. ನನಗೆ ತುಂಬಾ ಅನ್ಯಾಯ ಆಗಿದೆ ಎಂದು ನೋವು ತೋಡಿಕೊಂಡರು. ನಂತರ ನಾನು ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಇವರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ ವಿಚಾರಿಸಿ ನ್ಯಾಯ ಒದಗಿಸಿ ಕೊಡಿ ಎಂದು ಕೋರಿದ್ದೆ ಎಂದರು.
ಆ ಮಹಿಳೆ ಮತ್ತು ಮಗಳನ್ನು ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಿಕೊಟ್ಟಿದ್ದೆ. ಅದಾದ ನಂತರ ನನ್ನ ವಿರುದ್ಧವೇ ಏನೇನೋ ಮಾತನಾಡಲು ಶುರು ಮಾಡಿದರು. ಆಗ ಯಾಕೋ ಅವರ ಆರೋಗ್ಯ ಸರಿ ಇರುವಂತೆ ಕಾಣುವುದಿಲ್ಲ. ಹೆಚ್ಚು ಮಾತನಾಡಿ ಉಪಯೋಗ ಇಲ್ಲ ಎಂದು ಪೊಲೀಸ್ ಆಯುಕ್ತರಿಗೆ ಬಳಿ ಕಳಿಸಿಕೊಟ್ಟು ಸುಮ್ಮನಾದೆ. ಆದರೆ ಇದನ್ನ ಬೇರೆ ರೀತಿ ಮಾಡಿ ದೂರು ದಾಖಲಿಸಲಾಗಿದೆ. ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇನೆ. ಆದರೆ ಉಪಕಾರ ಮಾಡಲು ಹೋದರೆ ಹೇಗಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ಕಷ್ಟ ಇದೆ ಎಂದು ಹಣವನ್ನು ಕೊಟ್ಟು ಕಳುಹಿಸಿದೆ. ಇಷ್ಟಾದರೂ ಈ ರೀತಿಯ ಬೆಳವಣಿಗೆ ಆಗಿದೆ. ನೋಡೋಣ ಎಲ್ಲವನ್ನೂ ಎದುರಿಸೋಣ ಎಂದು ತಿಳಿಸಿದರು.
ಸದ್ಯ ಈಗ ಹೆಣ್ಣುಮಗಳು ದೂರು ಕೊಟ್ಟಿದ್ದಾರೆ. ಎಫ್ಐಆರ್ ಆಗಿದೆ, ಇರಲಿ. ಇದನ್ನು ಎದುರಿಸೋಣ. ಎಲ್ಲವನ್ನು ಎದುರಿಸೋಣ.. ನಾನು ಇದನ್ನ ರಾಜಕೀಯ ಅಂತ ಹೇಳಲ್ಲ. ಕಾನೂನು ರೀತಿ ಎದುರಿಸುತ್ತೇನೆ ಎಂದು ಮಾಧ್ಯಮಗಳಿಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಓದಿ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು