ಶಾಸಕ ವಿಜಯಾನಂದ ಕಾಶಪ್ಪನವರ ಮಾಧ್ಯಮದವರೊಂದಿಗೆ ಮಾತನಾಡಿದರು. ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳುವ ಮೂಲಕ ಅಸಮಾಧಾನಕ್ಕೆ ಇಂದು ತೆರೆ ಎಳೆದರು.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಕಚೇರಿಯಲ್ಲಿ ಕೈ ಶಾಸಕರು, ಸಚಿವರಾದ ಶಿವಾನಂದ ಪಾಟೀಲ, ಆರ್. ಬಿ. ತಿಮ್ಮಾಪುರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ, ಅಸಮಾಧಾನಿತ ವೀಣಾ ಕಾಶಪ್ಪನವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಭಾಗವಹಿಸಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ, ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾನೂ ಶ್ರಮಿಸುತ್ತೇನೆ. ಪ್ರತಿಯೊಬ್ಬರು ತನು ಮನದಿಂದ ನಾವು ಕೆಲಸ ಮಾಡುತ್ತೇವೆ ಎಂದರು.
ವೀಣಾ ಕಾಶಪ್ಪನವರ ಕೂಡ ಪ್ರಚಾರಕ್ಕೆ ಬರುತ್ತಾರೆ: ''ಅಸಮಾಧಾನ ನನಗೂ ಆಗಿತ್ತು, ಅವರಿಗೂ (ವೀಣಾ) ಆಗಿದೆ. ಅಸಮಾಧಾನ ಯಾಕೆ ಆಗಿತ್ತು ಅಂದ್ರೆ ಅವರು (ವೀಣಾ) ಪ್ರಬಲ ಆಕಾಂಕ್ಷಿ ಆಗಿದ್ದರು. ಇದು ಕುಟುಂಬದ ಸಮಸ್ಯೆ, ಖಂಡಿತ ಸರಿಪಡಿಸುತ್ತೇವೆ. ವೀಣಾ ಕಾಶಪ್ಪನವರ ಕೂಡ ಪ್ರಚಾರಕ್ಕೆ ಬರುತ್ತಾರೆ. ಸ್ವಲ್ಪ ಕಾಲಾವಕಾಶ ಬೇಕು, ದೊಡ್ಡ ಮನಸ್ಸು ಇದ್ದವರು ಬೇಗ ಮರೀತಾರೆ. ಸಣ್ಣ ಮನಸ್ಸಿದ್ದವರು, ಹೆಣ್ಮಗಳು ನೋವಾಗಿದೆ. ಈ ಅಸಮಾಧಾನ ಸರಿಪಡಿಸುತ್ತೇವೆ.
ಕಾಂಗ್ರೆಸ್ ಪಕ್ಷದಿಂದ ನಮಗೆ ಅಧಿಕಾರ ಕೂಡಾ ಸಿಕ್ಕಿದೆ. ಆ ನಿಟ್ಟಿನಲ್ಲಿ ವೀಣಾ ಅವರು ಜಿ.ಪಂ ಅಧ್ಯಕ್ಷೆ ಆಗಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೈ ಟಿಕೆಟ್ ಕೂಡಾ ಸಿಕ್ಕಿತ್ತು. ರಾಜ್ಯ ನಾಯಕರು ತೆಗೆದುಕೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹಗಲಿರುಳು ದುಡಿಯುತ್ತೇವೆ'' ಎಂದು ಸ್ಪಷ್ಟಪಡಿಸಿದರು.
ಇದನ್ನೂಓದಿ:ಇಬ್ಬರ ನಡುವೆ ಇದ್ದ ಮುನಿಸು ಅಂತ್ಯ; ಮೋದಿಗಾಗಿ ಒಂದಾದ ವಿಶ್ವನಾಥ್-ಸುಧಾಕರ್ - Lok Sabha election 2024