ಬೆಂಗಳೂರು:ನಮ್ಮ ಶಕ್ತಿ ಇರುವ ಕಡೆ ಮಾತ್ರ ಟಿಕೆಟ್ ಕೇಳಿದ್ದೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಶಕ್ತಿಯ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ಗೆ 2 ರಿಂದ 3 ಲಕ್ಷ ಮತಗಳು ಇವೆ. ಅದನ್ನು ಬಿಜೆಪಿಗೆ ಹಾಕಲು ಸೂಚನೆ ನೀಡಲಾಗಿದೆ ಎಂದರು.
ಇವತ್ತು ಕೋರ್ ಕಮಿಟಿ ಸಭೆ ಇದೆ. ಲೋಕಸಭೆ ಚುನಾವಣೆ ಘೋಷಣೆ ಆಗಿದೆ. ದಿನಾಂಕ ಪ್ರಕಟ ಆಗಿದೆ. ನಮ್ಮ ಪಕ್ಷದಲ್ಲಿ ಈಗಾಗಲೇ ಜಿಲ್ಲಾಧ್ಯಕ್ಷರ ನೇಮಕ ಆಗಿದೆ. 28 ಕ್ಷೇತ್ರಕ್ಕೆ ಉಸ್ತುವಾರಿಗಳ ನೇಮಕ ಮಾಡಿದ್ದೇವೆ. ಪದಾಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆಂದು ತಿಳಿಯಲು ಇವತ್ತು ಸಭೆ ಮಾಡುತ್ತೇವೆ. ನಾವು 3 ರಿಂದ 4 ಕ್ಷೇತ್ರಗಳನ್ನು ಕೇಳಿದ್ದೇವೆ. ನಮ್ಮ ಪಕ್ಷ ಗೆಲ್ಲುವ ಕ್ಷೇತ್ರ ಮಾತ್ರ ಕೇಳ್ತಿದ್ದೇವೆ. ನಮಗೆ ಸಿಗುವ ಟಿಕೆಟ್ ಜಾಗದಲ್ಲಿ ಬಿಜೆಪಿ ಅವರು ನಮಗೆ ಮತ ಹಾಕ್ತಾರೆ. ನಮ್ಮ ಗುರಿ 28ಕ್ಕೆ 28 ಸ್ಥಾನ ಗೆಲ್ಲುವುದು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರು.
ಜೆಡಿಎಸ್ ಕ್ಷೇತ್ರಗಳ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ನಾಯಕ ಹೆಚ್ ಡಿ ಕುಮಾರಸ್ವಾಮಿ ಬರುತ್ತಾರೆ. ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ನಮಗೆ ಸಿಗುವ ಕ್ಷೇತ್ರಗಳ ಬಗ್ಗೆ ನಮಗೆ ಯಾವುದೇ ಗೊಂದಲ ಇಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನಾವು ಕೇಳಿಲ್ಲ. ಆದರು ಬಿಜೆಪಿ ಅವರು ತೆಗೆದುಕೊಳ್ಳಿ ಅಂತಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಂತಿಮವಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.