ಕರ್ನಾಟಕ

karnataka

ETV Bharat / state

ಕೇರಳ ಭೂಕುಸಿತದಲ್ಲಿ 7 ಮಂದಿ ಕನ್ನಡಿಗರು ಸಾವು; ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ - WAYANAD LANDSLIDES - WAYANAD LANDSLIDES

ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಏಳು ಜನ ಕನ್ನಡಿಗರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ, ಕೇರಳದಲ್ಲಿ ಕನ್ನಡಿಗರ ಪತ್ತೆ ಕಾರ್ಯ ತೀವ್ರಗೊಂಡಿದ್ದು, ತಹಶಿಲ್ದಾರ್​ಗಳ ತಂಡಗಳು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿವೆ.

OFFICIALS VISIT THE CARE CENTER  KERALA LANDSLIDE TRAGEDY  CHAMARAJANAGARA
ಒಟ್ಟು 7 ಮಂದಿ ಕನ್ನಡಿಗರು ಮರಣ (ETV Bharat)

By ETV Bharat Karnataka Team

Published : Jul 31, 2024, 1:05 PM IST

Updated : Jul 31, 2024, 5:01 PM IST

ಚಾಮರಾಜನಗರ:ಕೇರಳದಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಒಟ್ಟು 7 ಮಂದಿ ಕನ್ನಡಿಗರು ಅಸುನೀಗಿದ್ದು, ಐವರ ಶವಗಳು ಪತ್ತೆಯಾಗಿವೆ.‌ ಚಾಮರಾಜನಗರದ ಮೂಲದ ನಾಲ್ವರು, ಮಂಡ್ಯ ಜಿಲ್ಲೆಯ ಮೂವರು ಸಾವನ್ನಪ್ಪಿರುವುದಾಗಿ ಗುಂಡ್ಲುಪೇಟೆ ತಹಶಿಲ್ದಾರ್ ರಮೇಶ್ ಬಾಬು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ.

ಮಂಗಳವಾರ ಚಾಮರಾಜನಗರದ ಪುಟ್ಟಸಿದ್ದಿ, ರಾಣಿ ಎಂಬವರ ಮೃತದೇಹಗಳು ಪತ್ತೆಯಾಗಿದ್ದವು. ಇಂದು ಮಂಡ್ಯ ಮೂಲದ ಮೂವರ ಶವಗಳು ಪತ್ತೆಯಾಗಿವೆ. ಕಣ್ಮರೆಯಾಗಿದ್ದ ಮಳವಳ್ಳಿ ಮೂಲದ 9 ಮಂದಿಯಲ್ಲಿ ಸಾವಿತ್ರಿ ಎಂಬವರ ಮೊಮ್ಮಗ, ಸಬಿತಾ ಮಗ ಅಚ್ಚು ಹಾಗೂ ಶ್ರೀಕುಟ್ಟಿ ಎಂಬವರು ಮೃತಪಟ್ಟಿದ್ದಾರೆ. ವೈತ್ರಿ ಆಸ್ಪತ್ರೆಯಲ್ಲಿ ಇವರ ಶವಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಚಾಮರಾಜನಗರ ತಾಲೂಕಿನ‌ ಇರಸವಾಡಿ ಮೂಲದ‌ ರಾಜನ್ ಮತ್ತು ರಜಿನಿ ದಂಪತಿ ಮೃತಪಟ್ಟಿದ್ದು, ಶವಗಳು ಪತ್ತೆಯಾಗಬೇಕಿದೆ. ಒಟ್ಟಾರೆಯಾಗಿ 7 ಮಂದಿ ಕನ್ನಡಿಗರು ಕೇರಳ ಭೂ ಕುಸಿತದಲ್ಲಿ ಪ್ರಾಣ ಕಳೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಕಾಳಜಿ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ (ETV Bharat)

ಕನ್ನಡಿಗರ ಪತ್ತೆ ಕಾರ್ಯ ತೀವ್ರ:ಕೇರಳ‌ ವಯನಾಡ್​ ಗುಡ್ಡ ಕುಸಿತ ಪ್ರಕರಣದಲ್ಲಿ ಸಿಲುಕಿರುವ ಕನ್ನಡಿಗರ ಗುರುತು ಪತ್ತೆ ಮತ್ತು ರಕ್ಷಣಾ ಕಾರ್ಯವನ್ನು ತೀವ್ರವಾಗಿ ನಡೆಸಲಾಗುತ್ತಿದೆ. ಆಸ್ಪತ್ರೆ ಮತ್ತು ಕಾಳಜಿ ಕೇಂದ್ರಗಳಿಗೆ ತಹಶಿಲ್ದಾರ್ ಗಳ ತಂಡಗಳು ಭೇಟಿ ನೀಡುತ್ತಿವೆ. ಚಾಮರಾಜನಗರ ತಹಶಿಲ್ದಾರ್ ಗಿರಿಜಮ್ಮ‌ ಮತ್ತು ಗುಂಡ್ಲುಪೇಟೆ ತಹಶಿಲ್ದಾರ್ ರಮೇಶ್ ಬಾಬು ತಂಡಗಳು ಪ್ರತ್ಯೇಕವಾಗಿ ವೈತ್ರಿ ತಾಲೂಕು ಕೇಂದ್ರ ಮತ್ತು ಇತರೆ ಕಡೆ ತೆರೆದಿರುವ ಕಾಳಜಿ ಕೇಂದ್ರಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಚಾಮರಾಜನಗರ ಸೇರಿದಂತೆ ಕರ್ನಾಟಕದವರ ಗುರುತು ಪತ್ತೆ ಹಾಗೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇದಕ್ಕಾಗಿ ಬತ್ತೇರಿಯಲ್ಲಿ ಎರಡು ಬಸ್​ಗಳನ್ನು ನಿಯೋಜನೆ ಮಾಡಲಾಗಿದೆ. ಸಂಜೆ ಹೊತ್ತಿಗೆ ಕನ್ನಡಿಗರನ್ನು ಕರೆತರುವ ನಿರೀಕ್ಷೆ ಇದ್ದು, ಎಲ್ಲರನ್ನೂ ಒಟ್ಟಿಗೆ ಕರೆತರಲು ನಿರಂತರ ಮಳೆ ಅಡ್ಡಿಯಾಗಿದೆ.

ಹಸುವಿನ ಚೀರಾಟದಿಂದ ಎಚ್ಚರಗೊಂಡು ಪಾರಾದ ಚಾಮರಾಜನಗರದ ವಿನೋದ್, ಗೌರಮ್ಮ ಕುಟುಂಬವು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಇವರನ್ನು ತಹಶಿಲ್ದಾರ್​ಗಳ‌ ತಂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಮಹೇಶ್, ರತ್ನಮ್ಮ ಎಂಬವರು ಕೂಡ ಪಾರಾಗಿದ್ದು ಇವರನ್ನು ಅಧಿಕಾರಿಗಳ ತಂಡ ಭೇಟಿಯಾಗಿದೆ.

5 ಲಕ್ಷ ಪರಿಹಾರ ಘೋಷಿಸಿದ ಸಿಎಂ: ''ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ, ''ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ'' ಎಂದಿದ್ದಾರೆ.

ಓದಿ:ವಯನಾಡ್​​ ಭೂಕುಸಿತ: ಮೃತರ ಸಂಖ್ಯೆ 143ಕ್ಕೇರಿಕೆ, ತಾತ್ಕಾಲಿಕ ಸೇತುವೆ ಕಟ್ಟಿ 1 ಸಾವಿರ ಜನರ ರಕ್ಷಿಸಿದ ಸೇನೆ - Wayanad Landslides

Last Updated : Jul 31, 2024, 5:01 PM IST

ABOUT THE AUTHOR

...view details