ಬೆಂಗಳೂರು: ಮಳೆ ಕೊರತೆಯಿಂದ ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಪ್ರದೇಶಗಳಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಬವಣೆ ತಲೆದೋರಿದೆ. ಈ ಕುರಿತಂತೆ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ ಆಘಾತಕಾರಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಬರಿದಾಗುತ್ತಿವೆ. ಈಗಿನ ನೀರಿನ ಮಟ್ಟದ ಪ್ರಕಾರ ಬೆಂಗಳೂರು ನಗರಕ್ಕೆ ಇನ್ನೊಂದು ತಿಂಗಳು ಮಾತ್ರ ನೀರು ಪೂರೈಸಲು ಸಾಧ್ಯವಿದೆ. ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಮಟ್ಟ ದಿನ ದಿನಕ್ಕೆ ಕುಸಿಯುತ್ತಿದೆ ಎಂದು ಈ ವರದಿ ತಿಳಿಸಿದೆ.
ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ನೀರು ಪೂರೈಕೆ ಇನ್ನೊಂದೆಡೆ, ಕುಡಿಯಲು ಮತ್ತು ಕೃಷಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯ ಬರಿದಾಗುವ ಹಂತ ತಲುಪಿದೆ. ಹೀಗಾಗಿ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನರಿಗೆ ಜಲಸಂಕಷ್ಟ ಎದುರಾಗಿದೆ. 105.79 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 9.4 ಟಿಎಂಸಿ ನೀರು ಮಾತ್ರ ಉಳಿದಿದ್ದು, ನಾಲ್ಕು ಜಿಲ್ಲೆಯ ಜನರ ದುಗುಡ ಹೆಚ್ಚಾಗಿದೆ. ಇನ್ನು ದಕ್ಷಿಣದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲೂ ಕುಡಿಯುವ ನೀರಿನ ಸಮಸ್ಯೆೆ ಸೃಷ್ಟಿಯಾಗುವ ಎಲ್ಲಾ ಮುನ್ಸೂಚನೆ ದೊರೆಯುತ್ತಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬವಣೆ ಕಾವೇರಿ ನೀರಿನ ಸಮಸ್ಯೆ: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಲಕ್ಕಸಂದ್ರ ವಾರ್ಡ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮನೆ ಇದೆ. ಇಲ್ಲಿಯೂ ನೀರಿಗಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಸಚಿವರ ಮನೆ ಇರುವ ರಸ್ತೆಯಲ್ಲಿಯೇ ಜನರು ಜೀವಜಲಕ್ಕಾಗಿ ಹಪಹಪಿಸುತ್ತಿದ್ದಾರೆ. ವಾರಕೊಮ್ಮೆ ಬರುವ ಕಾವೇರಿ ನೀರು ಸಣ್ಣ ಪ್ರಮಾಣದಲ್ಲಿ ಬರುತ್ತಿದೆ. ಅದೂ ಒಂದು ಗಂಟೆ ಮಾತ್ರ. ಬಿಟ್ಟ ನೀರು ಒಂದು ಬಿಂದಿಗೆಯೂ ತುಂಬಲ್ಲ ಎಂದು ಜನರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ನೀರು ಪೂರೈಕೆ ನೀರು ಬಿಡುವ ಸಮಯದಲ್ಲಿ ಮನೆಯಲ್ಲಿಯೇ ಇರಬೇಕು. ಕೆಲಸ, ಕಾರ್ಯ ಎಂದು ಹೊರಹೋದರೆ ಮುಂದಿನ ವಾರದವರೆಗೆ ಕ್ಯಾನ್ ನೀರೇ ನಮಗೆ ಗತಿ. ನೀರು ಹಿಡಿಯಬೇಕೆಂದರೆ ಕೆಲಸಕ್ಕೆ ರಜೆ ಹಾಕಬೇಕು. ಇಲ್ಲವಾದರೆ ನೀರು ಸಿಗುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗೆ ಹೇಳಿದರೆ, ಮಾಡಿಸುತ್ತೇನೆ, ನೋಡುತ್ತೇನೆ ಎಂದು ಹೇಳುತ್ತಿರುವುದಾಗಿ ಸ್ಥಳೀಯರಾದ ರಾಧಾ ಮತ್ತು ಸುಮಾ ಹೇಳಿದರು.
ಇದನ್ನೂ ಓದಿ:ಪಾರ್ಶ್ವವಾಯುವಿಗೆ ಕಾರಣವಾಗಬಹುದೇ ನಿರ್ಜಲೀಕರಣ?