ಕರ್ನಾಟಕ

karnataka

ಹಾವೇರಿ: ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ - heggeri lake

By ETV Bharat Karnataka Team

Published : Aug 4, 2024, 4:07 PM IST

Updated : Aug 4, 2024, 4:47 PM IST

ಯುಟಿಪಿ ಕಾಲುವೆಯಿಂದ ಹೆಗ್ಗೇರಿ ಕೆರೆಗೆ ನೀರು ಹರಿದುಬರುತ್ತಿದ್ದು, ದಿನದಿಂದ ದಿನಕ್ಕೆ ಕೆರೆ ಮೈದುಂಬಿಕೊಳ್ಳಲಾರಂಭಿಸಿದೆ. ಈಗಾಗಲೇ ಶೇ.70 ರಷ್ಟು ಕೆರೆ ತುಂಬಿದೆ.

ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ
ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ (ETV Bharat)

ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು (ETV Bharat)

ಹಾವೇರಿ: ನಗರಕ್ಕೆ ಕುಡಿಯುವ ನೀರು ಒದಗಿಸುವ ಹೆಗ್ಗೇರಿ ಕೆರೆಗೆ ಜೀವಕಳೆ ಬಂದಿದೆ. ಅಪ್ಪರ್ ತುಂಗಾ ಯೋಜನೆ (ಯುಟಿಪಿ) ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದ್ದು, ಈಗಾಗಲೇ ಶೇ 70 ರಷ್ಟು ಕೆರೆ ಭರ್ತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆರೆ ಭರಪೂರ ತುಂಬಲಿದೆ. ಈ ಕೆರೆ ತುಂಬಿದರೆ ಸಾವಿರಾರು ಎಕರೆಯಲ್ಲಿ ರೈತರು ವರ್ಷದಲ್ಲಿ ಎರಡು ಬೆಳೆ ಬೆಳೆಯಬಹುದು. ಸುತ್ತಮುತ್ತಲ ಗ್ರಾಮಗಳ ಅಂತರ್ಜಲಮಟ್ಟ ಸುಧಾರಿಸುತ್ತದೆ. ಕೊಳವೆಬಾವಿಗಳು ರಿಚಾರ್ಜ್​ ಆಗುತ್ತವೆ.

ಹಾವೇರಿ ನಗರಕ್ಕೆ ನೂತನವಾಗಿ ಜಾರಿಗೆ ತರಲಾಗಿರುವ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಹ ಹೆಗ್ಗೇರಿ ನೀರು ಬಳಸಲು ಜಿಲ್ಲಾಡಳಿತ ಈ ಕುರಿತಂತೆ ಚಿಂತನೆ ನಡೆಸಿದೆ. ಹೆಗ್ಗೇರಿ ಪ್ರಾಣಿಪಕ್ಷಿಗಳಿಗೆ ಆಶ್ರಯವಾಗಿದ್ದು ದೂರ ದೂರದ ಬಾನಾಡಿಗಳು ತಮ್ಮ ಆಹಾರ ವಂಶಾಭಿವೃದ್ಧಿಗಾಗಿ ಕೆರೆಯನ್ನೇ ಆಶ್ರಯಿಸಿವೆ. ಕೆರೆಯ ಸಮೃದ್ಧಿಯಾಗಿ ತುಂಬಿದೆ ಹಾವೇರಿ ಇನ್ನಷ್ಟು ಸುಭೀಕ್ಷೆಯಾಗಲಿದೆ.

ಕೆರೆ ಒತ್ತುವರಿ ತಡೆಯುವಂತೆ ಪರಿಸರವಾದಿಗಳ ಆಗ್ರಹ; ಜಿಲ್ಲಾಡಳಿತ ಮಳೆಗಾಲ ಮುಗಿಯುವವರೆಗೆ ಕೆರೆಗೆ ಯುಟಿಪಿ ನೀರು ಹರಿಸಿ ಕೆರೆಯನ್ನ ಪೂರ್ಣ ತುಂಬಿಸುವ ಮೂಲಕ ಹಾವೇರಿ ನಗರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜೊತೆಗೆ ಕೆರೆಯ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳಲಿ. ಕೆರೆಯ ಒಡ್ಡಿಗೆ ತಡೆಗೋಡೆ ನಿರ್ಮಿಸಲಿ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಸುಮಾರು 900ಕ್ಕೂ ಅಧಿಕ ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಅಂತರ್ಜಲಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬ್ಯಾಡಗಿ ತಾಲೂಕಿನ ಕಾಗಿನೆಲೆ ಕೆರೆ ಕೋಡಿ ಬಿದ್ದು ಹಾವೇರಿ ಹೆಗ್ಗೇರಿಗೆ ನೀರು ಹರಿದು ಬರುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಹೆಗ್ಗೇರಿಯ ಜಲಮೂಲಗಳು, ಕಾಲುವೆಗಳು ಹೂಳು ತುಂಬಿದ್ದರಿಂದ ಹೆಗ್ಗೇರಿ ಕೆರೆ ಭರಪೂರ ತುಂಬುವುದು ಕಡಿಮೆಯಾಗಿತ್ತು. ಇದನ್ನು ಅರಿತ ಹಾವೇರಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹರಿದಿರುವ ಯುಟಿಪಿ ಕಾಲುವೆಯ ಮೂಲಕ ಹೆಗ್ಗೇರಿ ಕೆರೆ ತುಂಬಿಸಲು ಮುಂದಾಗಿದೆ.

ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ಮಾತನಾಡಿ, ಹೆಗ್ಗೇರಿ ಕೆರೆಗೆ ಅಪ್ಪರ್ ತುಂಗಾ ಯೋಜನೆ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿದೆ. ಅಪ್ಪರ್ ತುಂಗಾ ಯೋಜನೆ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಈ ಕೆರೆ ತುಂಬುವುದರಿಂದ ಹಾವೇರಿ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ವಿಭೂತಿ ಶೆಟ್ಟಿ ಮಾತನಾಡಿ, ತುಂಗಾಭದ್ರಾ ಕಾಲುವೆ ಮೂಲಕ ನೀರು ಹರಿಸಿ ಹೆಗ್ಗೇರಿ ಕೆರೆಯನ್ನು ತುಂಬಿಸಲಾಗುತ್ತಿದೆ. ಈ ಕೆರೆ ತುಂಬಿದರೆ ಸುತ್ತಮುತ್ತಲ ಗ್ರಾಮಗಳ ಅಂತರ್ಜಲಮಟ್ಟ ಸುಧಾರಿಸುತ್ತದೆ ಮತ್ತು ಕೊಳವೆಬಾವಿಗಳು ರಿಚಾರ್ಜ್​ ಆಗುತ್ತವೆ. ಹಾವೇರಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ. ಕೃಷಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಹಾವೇರಿಯಲ್ಲಿ ಧಾರಾಕಾರ ಮಳೆ ; ಬೆಳೆಗಳು ಜಲಾವೃತ, ಕಂಗಾಲಾದ ರೈತರು - Crop damage by Flood water

Last Updated : Aug 4, 2024, 4:47 PM IST

ABOUT THE AUTHOR

...view details