ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಅಭಾವದ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ನಗರಾಭಿವೃದ್ಧಿ ಇಲಾಖೆಯ ಆಡಳಿತಗಾರರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ, ಮುಖ್ಯ ಆಯುಕ್ತರು, ವಲಯ ಆಯುಕ್ತರು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು, ಮುಖ್ಯ ಅಭಿಯಂತರರು ಸಭೆ ನಡೆಸಿ ಚರ್ಚಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು. ನೀರಿನ ಸಮಸ್ಯೆ ಪೂರೈಕೆಗೆ ಅನುದಾನದ ಕೊರತೆ ಇರುವ ಬಗ್ಗೆ ಸೂಕ್ತ ಮಾಹಿತಿ ನೀಡಿದರೆ ಅನುದಾನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಉದ್ಭವವಾಗದಂತೆ ಪಾಲಿಕೆ ಹಾಗೂ ಜಲಮಂಡಳಿಯು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಆ ಬಗ್ಗೆ ಪಟ್ಟಿ ಮಾಡಿಕೊಂಡು ಸಮಸ್ಯೆ ಬಗೆಹರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೀರಿನ ಅಭಾವ ಹೆಚ್ಚಿರುವ ಕಡೆ ಜಲಮಂಡಳಿ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ನಾಗರಿಕರಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ವಲಯ ಆಯುಕ್ತರು ನಿಮ್ಮ ಪ್ರದೇಶದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ, ಎಷ್ಟು ಅನುದಾನದ ಅಗತ್ಯವಿದೆ ಎಂಬುದರ ಮಾಹಿತಿಯನ್ನು ಕೊಡಿ. ಕೂಡಲೇ ಅಗತ್ಯ ಅನುದಾನವನ್ನು ಒದಗಿಸಲಾಗುವುದು. 110 ಹಳ್ಳಿಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿಯ ಅಧಿಕಾರಿ, ಸಿಬ್ಬಂದಿಗಳು ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ತುಂಗಭದ್ರಾ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು: ಆವರಿಸಿದ ಆತಂಕ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಬಿಬಿಎಂಪಿ, ಬಿಡಬ್ಲೂಎಸ್ ಎಸ್ ಬಿ ಹಾಗೂ ಬಿಡಿಎ ಸಮನ್ವಯದಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗಬಾರದು. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು ಎಲ್ಲಿಯೂ ನೀರಿನ ಅಭಾವ ಬಾರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.