ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ನಗರದ ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ಮಿತಿಗಿಂತ ಹೆಚ್ಚು ನೀರು ಬಳಕೆ ಮಾಡಿದರೆ ದಂಡ ವಿಧಿಸಲು ಅಪಾರ್ಟ್‌ಮೆಂಟ್‌ಗಳು ಮುಂದಾಗಿವೆ. ನೀರು ಪೂರೈಕೆ ವ್ಯತ್ಯಯವಾಗುತ್ತಿರುವುದರಿಂದ ಮಿತಿಯಲ್ಲಿ ಬಳಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಮಿತಿಗಿಂತ ಹೆಚ್ಚು ಬಳಸಿ ಪೋಲು ಮಾಡಿದರೆ ಅಂಥವರಿಗೆ ದಂಡ ವಿಧಿಸಲು ಮತ್ತು ನೀರಿನ ಬಳಕೆಯ ಮೇಲೆ ನಿಗಾ ಇಡಲು ಭದ್ರತಾ ಸಿಬ್ಬಂದಿ ನೇಮಕ ಮಾಡಲು ನಿರ್ಧರಿಸಿವೆ.
ನೀರಿನ ಪೋಲು, ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡುವುದರ ಜತೆಗೆ 5000 ರೂಪಾಯಿವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಒಟ್ಟಾರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು ಎಂದು ಹಲವು ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೇಳಿವೆ.
ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು, ದೈನಂದಿನ ನೀರಿನ ಬಳಕೆ ವೇಳೆ ಹೆಚ್ಚು ಜಾಗರೂಕತೆ ವಹಿಸುವಂತೆ ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ಸೂಚನೆ ನೀಡಿವೆ. ವೈಟ್ ಫೀಲ್ಡ್, ಯಲಹಂಕ ಮತ್ತು ಕನಕಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆ ಎದುರಾಗಿರುವುದು ಇದಕ್ಕೆ ಕಾರಣವಾಗಿದೆ.