ಕರ್ನಾಟಕ

karnataka

ETV Bharat / state

ಯತ್ನಾಳ್​, ಇತರ ಭಿನ್ನರ ವಿರುದ್ಧ ತಿರುಗಿ ಬಿದ್ದ ಪಕ್ಷ ನಿಷ್ಠರು; ರಾಷ್ಟ್ರೀಯ ನಾಯಕರಿಗೆ ವರದಿ ನೀಡಲು ಸಿದ್ಧತೆ? - WAQF SEPARATE PROTESTS

ಪ್ರತ್ಯೇಕ ಯಾತ್ರೆ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರ ಭಿನ್ನರ ವಿರುದ್ಧ ಪಕ್ಷ ನಿಷ್ಠರ ಪಡೆ ತಿರುಗಿ ಬಿದ್ದಿದ್ದು, ರಾಷ್ಟ್ರೀಯ ನಾಯಕರಿಗೆ ವರದಿ ನೀಡಲು ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

BJP faces internal conflict
ಸಂಗ್ರಹ ಚಿತ್ರ (IANS)

By ETV Bharat Karnataka Team

Published : Nov 27, 2024, 10:34 AM IST

Updated : Nov 27, 2024, 10:48 AM IST

ಬೆಂಗಳೂರು: ವಕ್ಫ್​ ಭೂಮಿ ವಿವಾದದ ಹಿನ್ನೆಲೆಯಲ್ಲಿ ಪ್ರತ್ಯೇಕ ಯಾತ್ರೆ ಮಾಡುತ್ತಿರುವ ಪಕ್ಷದ ಭಿನ್ನರ ವಿರುದ್ಧ ಮುಗಿಬಿದ್ದಿರುವ ಪಕ್ಷ ನಿಷ್ಠರ ಪಡೆ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ವರಿಷ್ಠರ ಮೇಲೆ ಒತ್ತಡ ಹೇರಲು ಸಜ್ಜಾಗಿದೆ.

ಇನ್ನೊಂದೆಡೆ, ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕ, ರಾಜ್ಯ ಪದಾಧಿಕಾರಿಗಳ ಬದಲಾವಣೆ ಹಾಗೂ ಭಿನ್ನಮತೀಯ ನಾಯಕರನ್ನು ನಿಯಂತ್ರಿಸುವ ಕುರಿತು ದೆಹಲಿ ವರಿಷ್ಠರಿಗೆ ದೂರು ಸಲ್ಲಿಸಲು ಸಹ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಡಿಸೆಂಬರ್‌ನಲ್ಲಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯ ನಾಯಕತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದು, ಈ ಕುರಿತು ವಿಜಯೇಂದ್ರ ಕೇಂದ್ರ ನಾಯಕರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.

ಉಪಚುನಾವಣೆ ಮುಗಿದ ಬೆನ್ನಲ್ಲೇ ವಿಜಯೇಂದ್ರ ರಾಜೀನಾಮೆಗೆ ಯತ್ನಾಳ್‌ ಮಾಡಿರುವ ಆಗ್ರಹ, ವಕ್ಫ್ ಬಗ್ಗೆ ಯತ್ನಾಳ್‌ ಬಣ ನಡೆಸುತ್ತಿರುವ ಅಭಿಯಾನವೆಲ್ಲವೂ ವಿಜಯೇಂದ್ರ ಬಣವನ್ನು ತೀವ್ರವಾಗಿ ಕೆರಳಿಸಿದೆ. ಜೊತೆಗೆ, ಪಕ್ಷ ವಿರೋಧಿ ಚಟುವಟಿಕೆಯನ್ನು ಹೆಚ್ಚಿಸುತ್ತಿರುವುದರಿಂದ ಅವರನ್ನು ಹಣಿಯುವುದಕ್ಕಾಗಿ ವಿಜಯೇಂದ್ರ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆಂದು ಮೂಲಗಳು ಹೇಳಿವೆ.

ಇದರ ನಡುವೆ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ. ಇತ್ತೀಚೆಗೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ಸೇರಿದ ಸುಮಾರು 20ಕ್ಕೂ ಹೆಚ್ಚು ಹಿರಿಯ ಮುಖಂಡರು ಈ ತೀರ್ಮಾನಕ್ಕೆ ಬಂದಿದ್ದಾರೆ.

ವಕ್ಫ್ ಒತ್ತುವರಿ ತೆರವು ವಿರೋಧಿ ಹೋರಾಟದ ಹೆಸರಿನಲ್ಲಿ ಪಕ್ಷದ ಕೆಲವು ನಾಯಕರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಪ್ರತಿ ಪಕ್ಷ ನಾಯಕರನ್ನು ಹೈಕಮಾಂಡ್ ನೇಮಕ ಮಾಡಿದೆ. ಈ ವಿಷಯವಾಗಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಆದರೆ, ಕೆಲವರು ಈ ನಾಯಕತ್ವ ಒಪ್ಪುವುದಿಲ್ಲ ಎಂದು ಹೈಕಮಾಂಡ್​ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಇಂಥವರನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ತೀರ್ಮಾನಿಸಿದೆ.

ಕೆಲವೇ ಕೆಲವು ಮಂದಿ ನಡೆಸುತ್ತಿರುವ ಚಟುವಟಿಕೆಗಳಿಂದ ಪಕ್ಷದಲ್ಲಿ ದೊಡ್ಡ ಪ್ರಮಾಣದ ಗೊಂದಲ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಿ ಭಿನ್ನಮತೀಯರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಅಗತ್ಯವಿದೆ ಎಂದು ತಿಳಿಸುವ ದೃಷ್ಟಿಯಿಂದ ನಿಯೋಗದಲ್ಲಿ ದೆಹಲಿಗೆ ತೆರಳಲು ಈ ಸಭೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್​ನಲ್ಲಿ ಸರ್ಜರಿ: ಮೂರು ಕ್ಷೇತ್ರಗಳ ಉಪಚುನಾವಣೆ ಸೋಲು, ಭಿನ್ನರ ನಡೆಗೆ ಬೇಸತ್ತ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿ, ಉತ್ಸಾಹ ತುಂಬುವುದಕ್ಕಾಗಿ ರಾಜ್ಯ ಬಿಜೆಪಿ ಡಿಸೆಂಬರ್‌ನಲ್ಲಿ ಮೇಜ‌ರ್ ಸರ್ಜರಿಗೆ ಮುಂದಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ತಗಾದೆ ಮುಂದುವರಿಸಿದರೆ ಸಮರ್ಥರಲ್ಲವೆಂದು ವರಿಷ್ಠರು ಬದಲಾಯಿಸಬಹುದು ಎಂಬ ತಂತ್ರಗಾರಿಕೆಯನ್ನು ಅತೃಪ್ತರ ಬಣ ಹೆಣೆದಿದ್ದರೆ, ಹೊಸ ತಂಡ ಕಟ್ಟಿ ಅತೃಪ್ತರನ್ನು ನಿವಾರಿಸಿಕೊಳ್ಳುವ ಪ್ರತಿತಂತ್ರವನ್ನು ಬಿ.ವೈ.ವಿಜಯೇಂದ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್​ನಲ್ಲಿ ನಡೆಯಲಿರುವ 'ಸಂಘಟನಾ ಪರ್ವ'ದ ಭಾಗವಾಗಿ ಬೂತ್, ಮಂಡಲ ಮತ್ತು ಜಿಲ್ಲಾ ಸಮಿತಿಗಳು ಮರು ರಚನೆಯಾಗಲಿವೆ. ಎಲ್ಲ ಸಮುದಾಯಗಳಿಗೆ ನಾಯಕತ್ವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಸಂಘಟನೆ ಗಟ್ಟಿಗೊಳಿಸುವ ಚಿಂತನೆ ನಡೆಸಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವರಿಷ್ಠರಿಗೆ ಶಿಫಾರಸು ಮಾಡುವ ಮೂಲಕ ಅವರ ತಂಡದಲ್ಲಿರುವವರಿಗೆ ಪರೋಕ್ಷ ಎಚ್ಚರಿಕೆ ನೀಡುವ ತಂತ್ರ ರೂಪಿಸಿದ್ದಾರೆ.

ಯತ್ನಾಳ್ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ: "ಬಿಜೆಪಿ ಶಿಸ್ತಿನ ಪಕ್ಷ. ರಾಜ್ಯಾಧ್ಯಕ್ಷರು ರಾಜ್ಯ ಕೋರ್ ಕಮಿಟಿ ಜೊತೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು, ಪಕ್ಷದ ನಿಯಮ-ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದ್ದಾರೆ.

"ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರು, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ. ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಆಗುತ್ತದೆ. ಯತ್ನಾಳ್ ಅವರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ" ಎಂದು ಪಿ.ರಾಜೀವ್ ತಿಳಿಸಿದ್ದಾರೆ.

"ಸ್ವಪ್ರತಿಷ್ಠೆಯಿಂದ ಪ್ರತ್ಯೇಕ ಹೋರಾಟ ಆರಂಭಿಸಿರುವುದು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡಕ್ಕೆ ಶೋಭೆ ತರುವುದಿಲ್ಲ. ಈಗಲಾದರೂ ಅವರು ಜಾಗೃತರಾಗಿ ಪಕ್ಷ ಬಲಪಡಿಸಲು ಸಹಕಾರ ನೀಡಬೇಕೆಂದು ವಿನಂತಿ ಮಾಡುತ್ತೇನೆ. ನಾವು ಮನವಿ ಮಾಡುವುದನ್ನು ಮಾಡುತ್ತೇವೆ, ಉಳಿದಿದ್ದು ಅವರಿಗೆ, ಕೇಂದ್ರದ ನಾಯಕರಿಗೆ ಬಿಟ್ಟಿದ್ದು. ಇದೆಲ್ಲವೂ ಹೈಕಮಾಂಡ್ ಗಮನದಲ್ಲೂ ಇದೆ, ನೋಡೋಣ" ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಹೇಳಿದ್ದಾರೆ.

ಇದನ್ನೂ ಓದಿ:

ವಿಜಯೇಂದ್ರ ಜೂನಿಯರ್, ಅವರಿಗೆ ಉತ್ತರ ಕೊಡಲ್ಲ: ರಮೇಶ್ ಜಾರಕಿಹೊಳಿ - Ramesh Jarakiholi

ಯಡಿಯೂರಪ್ಪನವರ ಮಗ ಎಂಬ ಅಹಂಕಾರವಿಲ್ಲ, ಹೆಮ್ಮೆ ಇದೆ: ಬಿ.ವೈ. ವಿಜಯೇಂದ್ರ - BJP State President

ಮೂರು ಕ್ಷೇತ್ರಗಳ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ: ಬಸನಗೌಡ ಪಾಟೀಲ್​ ಯತ್ನಾಳ್

Last Updated : Nov 27, 2024, 10:48 AM IST

ABOUT THE AUTHOR

...view details