ಹುಬ್ಬಳ್ಳಿ:ಕುಟುಂಬವೊಂದರ ಅಜ್ಜಿ, ಮಗಳು ಹಾಗು ಮೊಮ್ಮಗಳು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಇಂದು ಮತದಾನ ಮಾಡಿ ವಿಶೇಷವಾಗಿ ಗಮನ ಸೆಳೆದರು. ಇವರಲ್ಲಿ ಮೊಮ್ಮಗಳು ತಪಸ್ಯಾ ಪ್ರಭು ಇದೇ ಮೊದಲ ಬಾರಿಗೆ ಮತ ಹಾಕಿ ಖುಷಿಪಟ್ಟರು. 79 ವರ್ಷದ ಅಜ್ಜಿ ರಜನಿ ಪ್ರಭು, ಮಗಳು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೌಮ್ಯ ಪ್ರಭು, ಮೊಮ್ಮಗಳು ಮಾತ್ರವಲ್ಲದೇ ಇಡೀ ಪ್ರಭು ಕುಟುಂಬ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ರಜನಿ ಪ್ರಭು ಅವರು ಶೇಕಡಾವಾರು ಮತದಾನ ಕಡಿಮೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. "ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದವರನ್ನು ಶಿಕ್ಷಿಸುವ ಕ್ರಮ ಜಾರಿಗೆ ಬರಬೇಕು. ಮತ ಚಲಾಯಿಸದ ಸರ್ಕಾರಿ ನೌಕರರಿಗೆ ಇಂಕ್ರಿಮೆಂಟ್ ಕೊಡಬಾರದು. ಹಾಗಾದಾಗ ಮಾತ್ರ ಮತದಾನದ ಪ್ರಮಾಣ ಜಾಸ್ತಿ ಆಗುತ್ತದೆ. ಮತದಾನ ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಸಂಭ್ರಮದಿಂದ ಆಚರಿಸಬೇಕು" ಎಂದು ಕರೆ ನೀಡಿದರು.
ಅಜ್ಜಿ, ಅಮ್ಮನ ಜೊತೆ ಮೊದಲ ಬಾರಿಗೆ ಮತ ಚಲಾಯಿಸಿದ ತಪಸ್ಯಾ ಪ್ರಭು, "ಮೊದಲ ಬಾರಿಗೆ ಮತದಾನ ಮಾಡಿದ್ದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ತಪ್ಪದೇ ಹಕ್ಕು ಚಲಾಯಿಸಬೇಕು" ಎಂದರು.