ರಾಮನಗರ/ಬೆಂಗಳೂರು:ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ರಂಗೇರಿದೆ. ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು ಅಭ್ಯರ್ಥಿಗಳು ಸೇರಿದಂತೆ ಕ್ಷೇತ್ರದ ಮತದಾರರು ಮತಗಕಟ್ಟೆಗಳತ್ತ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಘಟಾನುಘಟಿಗಳ ಸ್ಪರ್ಧೆಯಿಂದ ಕ್ಷೇತ್ರಕ್ಕೆ ಅರೆ ಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಉಭಯ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪದ್ಮಾನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್, ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ. ನಾನು ಮತ್ತು ಶ್ರೀಮತಿ, ಮಕ್ಕಳು ಎಲ್ಲರೂ ಮತ ಹಾಕಿದ್ದೇವೆ. ಎಲ್ಲ ದಾನಕ್ಕಿಂತ ಮತದಾನ ಮಹತ್ವದ್ದು. ಇದಕ್ಕೆ ಎಲ್ಲರೂ ಸಮಯ ನೀಡಬೇಕೆಂದು ಮನವಿ ಮಾಡಿದರು.
ನಮಗೆ ಬೇಕಾದ ಸರ್ಕಾರ ತರಲು ಇದೊಂದು ಅವಕಾಶ. ಯಾವುದೇ ಕೆಲಸ ಇರಲಿ, ಮತದಾನಕ್ಕೆ ಒಂದೆರೆಡು ಗಂಟೆ ಮೀಸಲಿಡಿ. ಯುವಕರು ಮುಂದೆ ಬಂದು ವೋಟ್ ಮಾಡಬೇಕು. ವೀಕೆಂಡ್ ಅಂತ ಬೆಂಗಳೂರು ಬಿಟ್ಟು ಹೋಗಬಾರದು. ಇಂದು ಕ್ಷೇತ್ರದಲ್ಲೇ ಇದ್ದು ಮತಹಾಕಿ. ವೋಟ್ ಹಾಕದಿದ್ದರೆ ಟೀಕೆ ಮಾಡುವ ಹಕ್ಕಿರಲ್ಲ ಎಂದರು.
ಕನಕಪುರದಲ್ಲಿ ಕೊಪನ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ನಿನ್ನೆ ರಾತ್ರಿ ಕನಕಪುರ, ಸಾತನೂರು, ಮಾಗಡಿ, ರಾಮನಗರ ಭಾಗದಲ್ಲಿ ಆಮೀಷ, ಗ್ಯಾರಂಟಿ ಕಾರ್ಡ್ ಹಂಚಿಕೆ ಆಗಿದೆ. ಇದು ಅತ್ಯಂತ ಅಪವಿತ್ರ ವಿಚಾರ. ಯಾವತ್ತೂ ಮತದಾರರ ಮೇಲೆ ಒತ್ತಡ ಹಾಕಬಾರದು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಮುಕ್ತ ಅವಕಾಶ ಕೊಡಬೇಕು. ಚುನಾವಣೆ ಆರೋಗ್ಯಕರವಾಗಿರಬೇಕು ಎಂದು ಹೇಳಿದರು.
ಗ್ಯಾರಂಟಿ ಕಾರ್ಡ್ ಹಂಚಿಕೆ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದೇವೆ. ಗ್ಯಾರಂಟಿ ಕಾರ್ಡ್, ಕೊಪನ್ ಕೊಡಲಾಗುತ್ತಿದೆ. ಮತ ಹಾಕಿದ ನಂತರ ಕೊಪನ್ ಬಳಸಿ ನಿಮಗೆ ಬೇಕಾದನ್ನು ಖರೀದಿಸಿ ಅಂತಿದ್ದಾರೆ. ಇದು ಅಸಹ್ಯ ಬೆಳವಣಿಗೆ. ಕನಕಪುರದಲ್ಲಿ ನಮ್ಮವರು ರಾತ್ರಿ ಪ್ರತಿಭಟನೆ ಮಾಡಿದ್ದಾರೆ. ಮೂರ್ನಾಲ್ಕು ಸಾವಿರ ಕೊಪನ್ ಹಿಡಿದು ಕೆಲವರು ಹೋಗಿದ್ದಾರೆ. ಚುನಾವಣೆ ಹೀಗೆ ಆಗಬಾರದು. ನಮ್ಮ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ ನನಗೆ ವಿಶ್ವಾಸ ಹೆಚ್ಚಾಗಿದೆ ಎಂದರು. ಇದಕ್ಕೂ ಮುನ್ನ ಪತ್ನಿ ಅನುಸೂಯ, ಮಗ, ಮಗಳು ಸೇರಿ ಕುಟುಂಬ ಸಮೇತರಾಗಿ ಮನೆಯಿಂದ ನಡೆದುಕೊಂಡೇ ಬಂದು ಅವರು ಮತದಾನ ಮಾಡಿದರು.