ಚಾಮರಾಜನಗರ: ಹನೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದ ಘಟನೆ ಹನೂರು ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಹಿಂದಿನ ಮುಖ್ಯಾಧಿಕಾರಿ ಮೂರ್ತಿ ಹಾಗೂ ಹಾಲಿ ಅಧಿಕಾರಿ ಅಶೋಕ್ ನಡುವೆ ಕುರ್ಚಿಗಾಗಿ ವಾಗ್ವಾದವಾಗಿದೆ.
ಕಿತ್ತಾಟಕ್ಕೆ ಕಾರಣವೇನು ? ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿದ್ದ ಮೂರ್ತಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಡ್ಡಾಯ ನಿವೃತ್ತಿಗೊಳಿಸಿ, 2023 ಡಿಸೆಂಬರ್ 14ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು. ಬಳಿಕ, ಮೂರ್ತಿ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಅಧಿಕಾರಿಗೆ ನೀಡಲಾದ ಕಡ್ಡಾಯ ನಿವೃತ್ತಿ ಆದೇಶವನ್ನು ರದ್ದುಗೊಳಿಸಿ ಮರು ನೇಮಕಕ್ಕೆ ಆದೇಶ ಹೊರಡಿಸಿದೆ.
ಕೋರ್ಟ್ ಆದೇಶದ ಬಳಿಕ ಮೂರ್ತಿ ಅವರು, ಉಚ್ಚ ನ್ಯಾಯಾಲಯದ ಆದೇಶ ಪ್ರತಿ ಹಾಗೂ ಕರ್ತವ್ಯಕ್ಕೆ ಹಾಜರಾಗುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ನಗರ ಅಭಿವೃದ್ಧಿ ಕೋಶದ ಕಚೇರಿಗೆ ನೀಡಿ, ಕರ್ತವ್ಯಕ್ಕೆ ಹಾಜರಾಗಲು ಪಂಚಾಯಿತಿ ಕಚೇರಿಗೆ ಆಗಮಿಸಿದ್ದಾರೆ.
ಹಾಲಿ ಅಧಿಕಾರಿ ತಕರಾರು : ಅಶೋಕ್ ಅವರನ್ನು ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ನೇಮಿಸಿದ್ದರು. ಮೂರ್ತಿ ಅವರು ತಾವು ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದಾಗ, ಹಾಲಿ ಮುಖ್ಯಾಧಿಕಾರಿ ಅಶೋಕ್ ಅವರು ಇದಕ್ಕೆ ತಕರಾರು ತೆಗೆದಿದ್ದಾರೆ. ಹೈಕೋರ್ಟ್ ತನ್ನ ಕಡ್ಡಾಯ ರಜೆಯನ್ನು ರದ್ದು ಮಾಡಿದೆ. ಆದರೆ, ಹನೂರು ಪಟ್ಟಣ ಪಂಚಾಯಿತಿಗೆ ಮರು ನೇಮಕ ಮಾಡಿರುವ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಜೊತೆಗೆ, ಜಿಲ್ಲಾಧಿಕಾರಿಗಳಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹೀಗಾಗಿ, ನಿಮಗೆ ಅಧಿಕಾರ ಹಸ್ತಾಂತರ ಮಾಡಲು ಬರುವುದಿಲ್ಲ ಎಂದರು.
ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೂ ತಾವೇ ಮುಖ್ಯಾಧಿಕಾರಿಯಾಗಿ ಮುಂದುವರಿಯುವುದಾಗಿ ಅಶೋಕ್ ಅವರು ತಿಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಅಶೋಕ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮೂರ್ತಿ ಅವರು, ನಾನು ಅಧಿಕಾರ ವಹಿಸಿಕೊಳ್ಳಲು ಬರುವುದಿಲ್ಲ ಎಂಬುದನ್ನು ಲಿಖಿತ ರೂಪದಲ್ಲಿ ನೀಡಿ ಎಂದು ಆಗ್ರಹಿಸಿದ್ದಾರೆ. ಜೊತೆಗೆ ನಿಮ್ಮ ವಿರುದ್ಧ ಎಲ್ಲಿ ದೂರಬೇಕೋ ಗೊತ್ತು ನಮಗೆ ಎಂದು ಅಲ್ಲಿಂದ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.
ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟವು ಅಲ್ಲಿದ್ದ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿತ್ತು. ಜೊತೆಗೆ ಹಲವು ಕೆಲಸಗಳಿಗೆ ಬಂದ ಜನರೂ ಕೂಡ ಇರುಸು ಮುರುಸು ಅನುಭವಿಸಿದ್ದಾರೆ.
ಇದನ್ನೂ ಓದಿ: ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಫೈಟ್.. ಇತ್ತ ಸಾರ್ವಜನಿಕರ ಪರದಾಟ