ಬೆಂಗಳೂರು:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳು ಕೈ ವಶವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮಿತ್ರಪಕ್ಷಗಳಿಗೆ ಮುಖಭಂಗ ಉಂಟಾಗಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮತದಾರ ಬ್ರೇಕ್ ಹಾಕಿದ್ದಾರೆ.
ಮೂರನೇ ತಲೆಮಾರಿಗೆ ಕೈಕೊಟ್ಟ ಅದೃಷ್ಟ: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕುಟುಂಬ ರಾಜಕಾಣರಕ್ಕೆ ಮಣೆ ಹಾಕಲಾಗಿತ್ತು. ಆದರೆ, ಸಂಡೂರು ಕ್ಷೇತ್ರ ಹೊರತುಪಡಿಸಿದರೆ ಇನ್ನೆರಡು ಕ್ಷೇತ್ರಗಳಲ್ಲಿ ಮತದಾರ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಿಲ್ಲ. ಸಂಡೂರಿನಲ್ಲಿ ಇ.ತುಕಾರಾಂ ಪತ್ನಿ ಅನ್ನಪೂರ್ಣ ಅವರು ಗೆಲುವು ಕಂಡಿದ್ದರೆ, ಚನ್ನಪಟ್ಟಣದಲ್ಲಿ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರು ಸೋತಿದ್ದಾರೆ. ಮೂರನೇ ತಲೆಮಾರಿನ ನಿಖಿಲ್ ಕುಮಾರಸ್ವಾಮಿ ಹಾಗೂ ಭರತ್ ಬೊಮ್ಮಾಯಿ ಅವರಿಗೆ ಚುನಾವಣಾ ಅಖಾಡದಲ್ಲಿ ಅದೃಷ್ಟ ಕೈಕೊಟ್ಟಿದೆ.
ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುವ ಮೂಲಕ ಹ್ಯಾಟ್ರಿಕ್ ಸೋಲು ಅನುಭವಿಸುವಂತಾಗಿದೆ. ಇದರಿಂದ ಎನ್ಡಿಎ ಮೈತ್ರಿಗೆ ಹಿನ್ನಡೆಯಾಗಿದ್ದರೆ, ಕಾಂಗ್ರೆಸ್ಗೆ ನೆಲೆ ಮತ್ತಷ್ಟು ಗಟ್ಟಿಯಾಗಿದೆ.
ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು: ಜೆಡಿಎಸ್ ಭದ್ರಕೋಟೆ ಬೇಧಿಸಿರುವ ಕಾಂಗ್ರೆಸ್ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಹಿರಿಯ ನಟಿ ಸುಮಲತಾ ವಿರುದ್ಧ ಪರಾಭವಗೊಂಡಿದ್ದರು. ಈಗ ಮೂರನೇ ಬಾರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದರು.