ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧದ ಧ್ವನಿ ಮಾದರಿಯನ್ನು ಸರ್ಕಾರಿ ಏಜೆನ್ಸಿಯ ಬದಲು, ಖಾಸಗಿ ಪ್ರಯೋಗಾಲಯದಿಂದ ಪರೀಕ್ಷಿಸಿ ಅದನ್ನು ಆರೋಪಟ್ಟಿಯಲ್ಲಿ ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸುವುದು ಆರೋಪಿಗಳ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಲಂಚ ಪಡೆದ ಅಧಿಕಾರಿಯ ವಿರುದ್ಧ ಪ್ರಕರಣ ರದ್ದುಪಡಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯಸರ್ಕಾರ (ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು) ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ನ್ಯಾಯಪೀಠ, ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಅಲ್ಲದೆ, ಪ್ರಕರಣವನ್ನು ದೂರು ದಾಖಲಾದ ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಠಾಣಾಧಿಕಾರಿಗಳು ತನಿಖೆಯನ್ನು ಹೊಸದಾಗಿ ಪ್ರಾರಂಭಿಸದೆ, ಹಳೆಯ ಠಾಣಾಧಿಕಾರಿಗಳು ಮಾಡಿದ್ದ ತನಿಖೆಯನ್ನೇ ಮುಂದುವರೆಸಿದ್ದಾರೆ. ಈ ಪ್ರಕ್ರಿಯೆ ತನಿಖಾ ಕಾರ್ಯವಿಧಾನದ ಲೋಪವಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಠಾಣೆಯ ಇನ್ಸ್ಪೆಕ್ಟರ್ ಭಾಗಶಃ ತನಿಖೆ ನಡೆಸಿದ್ದರು. ಬಳಿಕ ಪ್ರಕರಣ ಚಿಕ್ಕಬಳ್ಳಾಪುರ ಲೋಕಾಯುಕ್ತ ಠಾಣೆಗೆ ವರ್ಗಾವಣೆಯಾಗಿದೆ. ವರ್ಗಾವಣೆ ಬಳಿಕ ಹೊಸದಾಗಿ ತನಿಖೆ ಪ್ರಾರಂಭಿಸಬೇಕಾಗಿತ್ತು. ಆದರೆ ಚಿಕ್ಕಬಳ್ಳಾಪುರದ ಲೋಕಾಯುಕ್ತ ಪೊಲೀಸರು ಬೆಂಗಳೂರು ಗ್ರಾಮಾಂತರ ಪೊಲೀಸರು ನಡೆಸಿದ್ದ ತನಿಖೆಯನ್ನೇ ಮುಂದುವರೆಸಿದ್ದಾರೆ. ಇದು ತನಿಖಾ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಖಾಸಗಿ ಏಜೆನ್ಸಿಯೊಂದರಿಂದ ಧ್ವನಿ ಮಾದರಿಗಳ ಪರಿಶೀಲನೆ ಮಾಡಲಾಗಿದ್ದು, ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮುಂದಿನ ಪ್ರಕ್ರಿಯೆನ್ನು ಪೂರ್ಣಗೊಳಿಸಬಹುದಾಗಿತ್ತು. ಅದಕ್ಕೆ ಬದಲು ಖಾಸಗಿ ಪ್ರಯೋಗಾಲಯದ ವರದಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಿರುವುದು ಆರೋಪಿಗಳ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ದೋಷಗಳು ಇಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಚಿಕ್ಕಬಳ್ಳಾಪುರದ ಪಾತಪಾಳ್ಯ ಪೊಲೀಸ್ ಠಾಣೆಯ ಮುಖ್ಯ ಪೇದೆ ರಾಮಾಚಾರಿ ಎಂಬುವರು ಎರವಲು ಸೇವೆಗಾಗಿ ಚಿಕ್ಕಬಳ್ಳಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ 2014ರಲ್ಲಿ ಚುನಾವಣಾ ಸಮಯದಲ್ಲಿ ವಶಪಡಿಸಿಕೊಂಡ ವಾಹನವನ್ನು ಬಿಡುಗಡೆ ಮಾಡಲು 5 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರುದಾರರು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ಠಾಣೆಗೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 7 ಮತ್ತು ಸೆಕ್ಷನ್ 13(2)ರ ಅಡಿಯಲ್ಲಿ ದೂರು ದಾಖಲಿಸಿದ್ದರು.
ದೂರು ಘಟನೆಯ ಸ್ಥಳದ ವ್ಯಾಪ್ತಿ ಹೊಂದಿರಲಿಲ್ಲ. ಆದರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ವರ್ಗಾವಣೆ ಮಾಡದೆ ತಾವೇ ಭಾಗಶಃ ತನಿಖೆ ನಡೆದಿದ್ದರು. ಈ ನಡುವೆ ಪ್ರಕರಣ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಆದರೆ, ಅದಾದ ಬಳಿಕ ಹೊಸದಾಗಿ ತನಿಖೆ ನಡೆಸದೆ, ಹಿಂದಿನ ಪೊಲೀಸ್ ಅಧಿಕಾರಿಗಳು ನಡೆಸಿದ್ದ ತನಿಖೆಯನ್ನು ಚಿಕ್ಕಬಳ್ಳಾಪುರ ಪೊಲೀಸರು ಮುಂದುವರೆಸಿ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದಿಂದ ತಮ್ಮನ್ನು ಮುಕ್ತರನ್ನಾಗಿಸಬೇಕು ಎಂದು ರಾಮಾಚಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ತನಿಖಾ ಪ್ರಕ್ರಿಯೆಯಲ್ಲಿ ಲೋಪಗಳಿವೆ, ಜತೆಗೆ ಆರೋಪಕ್ಕೆ ಸಂಬಂಧಿಸಿದ ಧ್ವನಿ ಮಾದರಿಗಳನ್ನು ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯದ ಬದಲಾಗಿ ಖಾಸಗಿ ಏಜೆನ್ಸಿಗೆ ಕಳುಹಿಸಲಾಗಿದ್ದು, ಅದರ ವರದಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು