ಬೆಂಗಳೂರು:ಕಗ್ಗಂಟಾಗಿದ್ದ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ವಿವೇಕಾನಂದ ಅವರಿಗೆ ನೀಡಲಾಗಿದೆ. ಪರಿಷತ್ನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಅವರ ನಡುವೆ ಜೆಡಿಎಸ್ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಈ ಬಗ್ಗೆ ನಾಳೆ ಸಭೆ ನಡೆಸಿ ತೀರ್ಮಾನಿಸುವುದಾಗಿ ಜೆಡಿಎಸ್ ನಾಯಕರು ಹೇಳಿದ್ದರಾದರೂ, ಇಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡರು, ವಿವೇಕಾನಂದ ಅವರಿಗೆ ಬಿ ಫಾರಂ ನೀಡಿ ಗೆದ್ದು ಬರುವಂತೆ ಆಶೀರ್ವದಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ, ಮುಖಂಡರಾದ ನಿರಂಜನ್ ಮೂರ್ತಿ, ನಾಗಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಜಿ.ಟಿ.ದೇವೇಗೌಡ, ''ಇವತ್ತು ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿ ಫಾರಂ ತೆಗೆದುಕೊಂಡು ಹೋಗಲು ಬಂದಿದ್ದೆವು. ವಿವೇಕಾನಂದ ಅವರನ್ನು ಅಭ್ಯರ್ಥಿ ಮಾಡಲು ಎಲ್ಲರೂ ಒಪ್ಪಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಇವತ್ತು ದೇವೇಗೌಡರು ಬಿ ಫಾರಂ ಕೊಟ್ಟರು. ನಾಳೆ ಮಧ್ಯಾಹ್ನ 12 ಗಂಟೆಗೆ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ'' ಎಂದು ಹೇಳಿದರು.
ಯಾರಿಗಾದ್ರೂ ಅನುಕಂಪ ಆಗುತ್ತದೆ:ಹೆಚ್.ಡಿ.ರೇವಣ್ಣ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಕಂಪದ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ''ಯಾರಿಗೇ ಆದ್ರೂ, ಮನುಷ್ಯನಾದವನಿಗೆ ಒಂದಲ್ಲ ಒಂದು ಟೈಮ್ ಅನುಕಂಪ ಆಗುತ್ತದೆ. ಅದೇ ರೀತಿ ಅವರೂ ಅನುಕಂಪ ವ್ಯಕ್ತಪಡಿಸಿದ್ದಾರೆ. ಒಬ್ಬರಿಗೆ ಒಬ್ಬರು ಮಾತನಾಡುವಾಗ ಟೀಕೆ ಟಿಪ್ಪಣಿಗಳು ಸಾಮಾನ್ಯ. ಶಿವಕುಮಾರ್ ಅವರಿಗೆ ನಿಜವಾದ ಅರಿವಾಗಿ ಅನುಕಂಪ ವ್ಯಕ್ತಪಡಿಸಿದ್ದಾರೆ'' ಎಂದರು.
ತಪ್ಪು ಮಾಡದೇ ಶಿಕ್ಷೆ:''ಹೆಚ್.ಡಿ.ರೇವಣ್ಣ ಅವರು ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾರೆ. ಅವರ ಮನಸ್ಸಿನಲ್ಲಿ ನೋವು ಇದೆ. ರಾಜ್ಯದ ಜನತೆಗೂ ಅದು ಗೊತ್ತಿದೆ, ರಾಜಕಾರಣಿಗಳಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಿಲ್ಲದೆ ಏನಿಲ್ಲ. ಗೊತ್ತಿದ್ರೂ ಎಸ್ಐಟಿ ಮೂಲಕ ಅವರನ್ನು ಬಂಧನ ಮಾಡಿದ್ದು ಸರಿಯಲ್ಲ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗಿದೆ'' ಎಂದು ಹೇಳಿದರು.