ಆಮೆಗತಿ ಕಾಮಗಾರಿಯಿಂದ ಮನೆ ಮುಂದಿನ ಚರಂಡಿಯಿಂದ ದುರ್ನಾತ ದೊಡ್ಡಬಳ್ಳಾಪುರ:ನಿಧಾನಗತಿಯಲ್ಲಿ ಸಾಗುತ್ತಿರುವ 'ಜಲ ಜೀವನ್ ಮಿಷನ್ ಯೋಜನೆ' ಕಾಮಗಾರಿಯ ಅವಾಂತರದಿಂದ ಮಾತುಕತೆಯ ಮುನ್ನವೇ ಮದುವೆ ಸಂಬಂಧ ಮುರಿದು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ತಾಲೂಕಿನಲ್ಲಿಯೇ ನಾರಸಿಂಹನಹಳ್ಳಿ ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಗ್ರಾಮದಲ್ಲಿ ಯಾವುದೇ ಸರಿಯಾದ ಕೆಲಸ ಕಾರ್ಯ ನಡೆಯುತ್ತಿಲ್ಲ. ಜಲ ಜೀವನ ಮಿಷನ್ ಕಾಮಗಾರಿ ಪ್ರಾರಂಭವಾಗಿ ವರ್ಷವಾದರೂ ಪೂರ್ಣವಾಗಿಲ್ಲ. ಓವರ್ ಹೆಡ್ ಟ್ಯಾಂಕ್ ಅರ್ಧದಲ್ಲೇ ನಿಂತಿದೆ. ಮನೆಯ ಮುಂದೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಈ ಬಗ್ಗೆ ಗುತ್ತಿಗೆದಾರಿಗೆ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಏನಾದರೂ ಅನುಹಾತುಗಳು ನಡೆದರೆ ಅದಕ್ಕೆ ಗುತ್ತಿಗೆದಾರರೇ ಕಾರಣ. ಇಂತಹ ಪರಿಸ್ಥಿತಿಯಲ್ಲಿರುವಾಗ ಬೆಂಗಳೂರಿನಿಂದ ನಮ್ಮ ಮನೆಗೆ ಹೆಣ್ಣು ಕೊಡಲು ಬಂದಿದ್ದರು. ಮನೆ ಮುಂದೆ ಚರಂಡಿಯಲ್ಲಿ ದುರ್ನಾತ ಬೀರುವ ಸ್ಥಿತಿ ನೋಡಿ ತಮಗೆ ಈ ಸಂಬಂಧವೇ ಬೇಡವೆಂದು ಹೋಗಿದ್ದಾರೆ ಎಂದು ಗ್ರಾಮಸ್ಥರಾದ ಗಂಗಾರಾಜ್ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಜಲ ಜೀವನ ಯೋಜನೆಯಡಿ ಪೈಪ್ ಲೈನ್ ಅಳವಡಿಕೆಗಾಗಿ ತೆಗೆದ ಹಳ್ಳವನ್ನು ಹಾಗೆಯೇ ಬಿಡಲಾಗಿದೆ. ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ಕುಂಠಿತಗೊಂಡಿದೆ. ಕಳೆದ ಆರು ತಿಂಗಳಿಂದ ರಸ್ತೆ ಅಗೆದಿರುವ ಪರಿಣಾಮ ಮಕ್ಕಳು, ವಯಸ್ಸಾದವರು ರಾತ್ರಿ ವೇಳೆ ಓಡಾಡುವುದು ಕಷ್ಟವಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ. ಈ ಕಾಮಗಾರಿಗೆ ಹಣ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಿ ಗ್ರಾಮದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಎಂಬುವವರು ಒತ್ತಾಯಿಸಿದರು.
ನಾರಸಿಂಹನಹಳ್ಳಿಯ ಜಲ ಜೀವನ್ ಮಿಷನ್ ಯೋಜನೆಯ ಗುತ್ತಿಗೆದಾರರಾದ ಪುರುಷೋತ್ತಮ್ ಅವರಿಗೆ ಕಾಮಗಾರಿ ಪ್ರಾರಂಭಿಸುವಂತೆ ಹೇಳಲಾಗಿದೆ. ನಾಳೆಯಿಂದ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ನಾಳೆ ಕಾಮಗಾರಿ ಮಾಡದಿದ್ದಲ್ಲಿ ನೊಟೀಸ್ ನೀಡುತ್ತೇವೆ ಎಂದು ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳು ಜನಸಾಮಾನ್ಯರ ಸೇವೆ ಸಲ್ಲಿಸಬೇಕೇ ವಿನಃ ಪ್ರಭಾವಿಗಳ ಪರ ಅಲ್ಲ: ಹೈಕೋರ್ಟ್