ಮೈಸೂರು:ನಗರ ಹೊರವಲಯದಲ್ಲಿ ಹಂಚ್ಯಾ ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಲಕ್ಷ್ಮಿ ದೇವಮ್ಮ, ಆಂಜನೇಯ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದಂಪತಿ ಭಾಗವಹಿಸಿ, ಹೋಮ ಹವನ ಪೂಜೆ ನೆರವೇರಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಹೋಮದಲ್ಲಿ ಕುಳಿತು ವಿಜಯೇಂದ್ರ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿ, ಚಾಮರಾಜನಗರ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ''ರಾಜ್ಯ ಸರ್ಕಾರದ ಬಳಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗದಷ್ಟು ಕಷ್ಟವಾದ ಪರಿಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಗಳಿಗೆ ಸರ್ಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ, ದಾನಿಗಳು ಅಲ್ಲಿಗೆ ಬಂದು ದಾನ ಮಾಡುತ್ತಾರೆ. ಈ ಸರ್ಕಾರಕ್ಕೆ 224 ಕ್ಷೇತ್ರಗಳಿಗೆ ಒಂದು ರೂಪಾಯಿ ಕೊಡಲು ಆಗುತ್ತಿಲ್ಲ. ರಾಜ್ಯದ ಹಣೆಬರಹ ಹೇಗಿದೆ ನೋಡಿ'' ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ : ''ನಾಡಗೀತೆ ವಿಚಾರದಲ್ಲಿ ಸರ್ಕಾರದ ಅಜೆಂಡಾ ಏನು ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತದೆ. ಇದರಿಂದ ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿಯ ಚಿಂತನೆಯಲ್ಲಿದೆ. ಕನ್ನಡ ನಾಡ-ನುಡಿಗೆ ಸಿಎಂ ಧಕ್ಕೆ ತರುತ್ತಿದ್ದಾರೆ. ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ ಎಂಬ ಭ್ರಮೆಯಲ್ಲಿ ಸಿಎಂ ಇದ್ದಾರೆ. ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ. ದೆಹಲಿ ಚಲೋ ನಾಟಕ ಮಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕುಮಾರಸ್ವಾಮಿ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಕೆಲವರು ಕಾಂಗ್ರೆಸ್ ಸೇರುವ ವಿಚಾರವೂ ಗೊತ್ತಿಲ್ಲ, ಊಹಾಪೋಹಗಳಿಗೆ ಉತ್ತರ ನೀಡುವುದಿಲ್ಲ'' ಎಂದು ಹೇಳಿದರು.