ದಾವಣಗೆರೆ: "ಬಾಂಬ್ ಸ್ಫೋಟ ಪ್ರಕರಣ ನಡೆದಿದೆ ಮತ್ತು ದೇಶ ವಿರೋಧಿ ಘೋಷಣೆ ಕೂಗುವ ವ್ಯವಸ್ಥೆ ನಿರ್ಮಾಣವಾಗಿದ್ದರೂ ಅಂತಹವರ ಮೇಲೆ ಕ್ರಮ ಕೈಗೊಳ್ಳುವ ಶಕ್ತಿ ಸರ್ಕಾರಕ್ಕೆ ಇಲ್ಲ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸರ್ಕಾರದ ಬೇಜಾವಾಬ್ದಾರಿತನ ಖಂಡಿಸಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ವಿಧಾನಸೌಧದಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವುದನ್ನು ಕೇಳಿ ರಾಜ್ಯಪಾಲರು ದಿಗ್ಬ್ರಮೆಗೊಂಡರು" ಎಂದರು.
"ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ರಾಜಾರೋಷವಾಗಿ ಬಾಂಬ್ ಇಟ್ಟು ಹೋದರೂ, ಆರೋಪಿಯನ್ನು ಬಂಧಿಸದೇ ಸರ್ಕಾರ ಹೇಳಿಕೆಯನ್ನಷ್ಟೇ ನೀಡುತ್ತಿದೆ. ರಾಜ್ಯದ ಜನರ ಹೃದಯವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಇದರಿಂದ ರಾಜ್ಯದ ಜನತೆಗೆ ನೋವಾಗಿದೆ. ವಿಧಿವಿಜ್ಞಾನ ಕೇಂದ್ರದಿಂದ ವರದಿ ಬಂದರೂ, ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಇಲ್ಲ. ಇದನ್ನು ಪ್ರಶ್ನಿಸಿದ ಮಾಧ್ಯಮದವರನ್ನು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆದರಿಸಿದ್ದಾರೆ" ಎಂದು ಆರೋಪಿಸಿದರು.
"ಎಫ್ಎಸ್ಎಲ್ ವರದಿ ಇದ್ದರೂ ಈವರೆಗೆ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದೀರಿ?. ಪಾಕ್ ಪರ ಘೋಷಣೆ ವಿಚಾರ ಬಿಟ್ಟು ಉಳಿದಿದ್ದಕ್ಕೆ ಉತ್ತರ ಕೊಡುತ್ತೇನೆ ಎಂದು ಸಿಎಂ ಹೇಳ್ತಾರೆ, ವಿಧಾನಸೌಧದಲ್ಲೇ ಈ ಘಟನೆ ನಡೆದಿದ್ದರೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇನ್ನು ಹೇಗೆ ದೇಶದ ಜನರನ್ನು ಕಾಪಾಡುತ್ತಾರೆ. ಬಾಯಿ ತೆಗೆದರೆ ಸಂವಿಧಾನ ರಕ್ಷಣೆ ಬಗ್ಗೆ ಕಾಂಗ್ರೆಸ್ನವರು ಮಾತಾಡುತ್ತಾರೆ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದೇ ಕಾಂಗ್ರೆಸ್. ಈಗ ಸಂವಿಧಾನಕ್ಕೆ ಧಕ್ಕೆ ಆಗಿದೆ ಅಂತಾ ಸಂವಿಧಾನ ಜಾಗೃತಿ ಜಾಥಾ ಮಾಡುತ್ತಾರೆ. ಇದಕ್ಕೆ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ್ದವರನ್ನು ಭಾಷಣ ಮಾಡಲು ಆಹ್ವಾನಿಸುತ್ತಾರೆ" ಎಂದು ಟೀಕಿಸಿದರು.