ಬೆಳಗಾವಿ:ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಕಿತ್ತೂರಿನ ದೇಗುಲಹಳ್ಳಿ - ಅಂಬಡಗಟ್ಟಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಇದೀಗ ಕ್ಷೇತ್ರ ಬದಲಿಸಿದ್ದು, ಉತ್ತರ ಕನ್ನಡ (ಕೆನರಾ) ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ವೀರೇಶ್ವರ ಸ್ವಾಮೀಜಿ, ನಮ್ಮದು ಕಾರವಾರ ಮತಕ್ಷೇತ್ರ ವ್ಯಾಪ್ತಿ ಆಗಿರುವ ಹಿನ್ನೆಲೆ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂದರೆ, ಸ್ವಾಮೀಜಿಯಾಗಿ ಮಠದ ಸೇವೆ ಮಾಡುತ್ತಿರುವ ನಾನು, ಈಗ ಸಮಾಜ ಸೇವೆ ಮಾಡಬೇಕು, ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಕಣಕ್ಕಿಳಿಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಮತ್ತು ಭಕ್ತರ ಇಚ್ಛೆಯೂ ಆಗಿದೆ ಎಂದರು.
ನಾವು ಯಾವ ರಾಜಕಾರಣಿಗಳನ್ನು ಈವರೆಗೂ ಸಂಪರ್ಕಿಸಿಲ್ಲ. ಆದರೆ, ಕಿತ್ತೂರು ಮತ್ತು ಖಾನಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಭೆ ಮಾಡಲಾಗಿದ್ದು, ಅಲ್ಲಿನ ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ನಿಮ್ಮ ಜೊತೆ ನಾವು ಇರುತ್ತೇವೆ. ನೀವು ಖಂಡಿತವಾಗಲೂ ಚುನಾವಣೆಯಲ್ಲಿ ಆಯ್ಕೆಯಾಗುತ್ತೀರಿ ಎಂದು ವಿಶ್ವಾಸ ಮೂಡಿಸುತ್ತಿದ್ದಾರೆ. ಇನ್ನು ನಾವು ಯಾರ ವಿರುದ್ಧ ಮತ್ತು ಪರವೂ ಇಲ್ಲ ಎಂದು ವೀರೇಶ್ವರ ಸ್ವಾಮೀಜಿ, ಏಪ್ರಿಲ್ 12 ಅಥವಾ 13ರಂದು ನಾಮಪತ್ರ ಸಲ್ಲಿಸಬೇಕು ಎಂದು ನಿರ್ಧರಿಸಿದ್ದೇವೆ ಎಂದರು.
ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುತ್ತಿರುವುದರ ಬಗ್ಗೆ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ ಮತ್ತು ಜೋಶಿ ಅವರ ನಡುವೆ ಏನಾಗಿದೆ ಗೊತ್ತಿಲ್ಲ. ನಾವು ಯಾವ ರಾಜಕಾರಣಿಗಳ ವಿರುದ್ಧವೂ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರ ಮತ್ತು ವಿರುದ್ಧವೂ ಇಲ್ಲ. ನನಗೆ ಎಲ್ಲರೂ ಅಷ್ಟೇ. ಜನರ ಸೇವೆ ಮಾಡುವ ಉದ್ದೇಶದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ವೀರೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸ್ವಾಮೀಜಿಗಳು ಯಾರಾದರೂ ತಮಗೆ ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆಗೆ, ನಾನು ಕೇಳಿದರೆ ಬಹಳಷ್ಟು ಸ್ವಾಮೀಜಿಗಳು ಬೆಂಬಲ ಕೊಡುತ್ತಾರೆ. ಆದರೆ, ನಾನು ಯಾರಿಗೂ ಕೇಳಿಕೊಳ್ಳುವುದಿಲ್ಲ ಎಂದ ವೀರೇಶ್ವರ ಸ್ವಾಮೀಜಿ, ಎಲ್ಲ ಮತದಾರರು ಸ್ವಖುಷಿಯಿಂದ ಒಂದು ಮತವನ್ನು ನನಗೆ ದಾನವನ್ನಾಗಿ ಕೊಡಬೇಕು. ಅದಕ್ಕೆ ಪ್ರತಿಯಾಗಿ ನಾನು ಜೀವನಪರ್ಯಂತ ನಿಮ್ಮ ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಜನರಿಗೋಸ್ಕರ ನಮ್ಮ ಜೀವನ ಮುಡುಪಿಟ್ಟಿರುವ ನನಗೆ ತಮ್ಮ ಒಂದು ಮತ ದಾನ ಕೊಡಿ. ನಾನು ಸಂಸದನಾಗಿ ಆಯ್ಕೆಯಾದರೆ ಕೇಂದ್ರ ಸರ್ಕಾರದ ಅನುದಾನ ಸರಿಯಾಗಿ ಸದ್ಬಳಕೆ ಆಗುವಂತೆ ನೋಡಿಕೊಳ್ಳುತ್ತೇನೆ. ಜನರ ಬೇಕು, ಬೇಡಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಸನ್ಯಾಸಿಯಾಗಿ ನಾನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ನನಗೇನು ಪತ್ನಿ, ಮಕ್ಕಳಿಲ್ಲ. ಬಿಲ್ಡಿಂಗ್ ಕಟ್ಟಬೇಕು ಅಥವಾ ಆಸ್ತಿ ಗಳಿಸಬೇಕು ಎಂಬ ಆಸೆಯೂ ನನಗಿಲ್ಲ. ಜನರ ಸೇವೆ ಮಾಡುವ ಏಕೈಕ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ವೀರೇಶ್ವರ ಸ್ವಾಮೀಜಿ ತಮ್ಮ ಅಭಿಪ್ರಾಯ ಹೇಳಿದರು.
ಓದಿ:ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP