ಕರ್ನಾಟಕ

karnataka

ಹೆಸ್ಕಾಂನಲ್ಲಿ ಕರ್ತವ್ಯ; ಮರಿಕಲ್ಯಾಣದಲ್ಲಿ ಕೋಟ್ಯಂತರ ರೂ. ಮೌಲ್ಯದ ಸ್ಪಟಿಕಲಿಂಗ ಸ್ಥಾಪಿಸಿ ಪೂಜೆ - Veerabhadra Shri

By ETV Bharat Karnataka Team

Published : Jun 30, 2024, 5:20 PM IST

ರಂಭಾಪುರಿ ವೀರಸೋಮೇಶ್ವರ ಸಂಸ್ಥಾನದ ಶಾಖಾ ಹಿರೇಮಠದ ಮಠಾಧೀಶರಾಗಿರುವ ವೀರಭದ್ರ ಶಿವಾಚಾರ್ಯರು ಹಲವು ಲಿಂಗಗಳ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಮಠದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಪಟಿಕಲಿಂಗ ಸ್ಥಾಪನೆ ಮಾಡಿದ್ದಾರೆ.

veerabhadra-shri
ವೀರಭದ್ರ ಶ್ರೀಗಳು (ETV Bharat)

ಸ್ಪಟಿಕಲಿಂಗದ ಬಗ್ಗೆ ಮಾಹಿತಿ ನೀಡಿದ ವೀರಭದ್ರ ಶ್ರೀಗಳು (ETV Bharat)

ಹಾವೇರಿ :ಜಿಲ್ಲೆಯಲ್ಲಿ ಹಲವು ವಿಶಿಷ್ಟ ಮಠಗಳಿವೆ. ಹಾವೇರಿ ನಗರ ಒಂದರಲ್ಲೇ 63 ಮಠಗಳಿದ್ದು, ಹಾವೇರಿಗೆ ಮರಿಕಲ್ಯಾಣ, ಎರಡನೇ ಕಲ್ಯಾಣ ಎಂತಲೂ ಕರೆಯುತ್ತಾರೆ. ಜಿಲ್ಲೆಯ ವಿಶಿಷ್ಟಮಠಗಳಲ್ಲಿ ಒಂದು ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ರಂಭಾಪುರಿ ವೀರಸೋಮೇಶ್ವರ ಸಂಸ್ಥಾನದ ಶಾಖಾ ಹಿರೇಮಠ. ಈ ಮಠದ ವಿಶಿಷ್ಟತೆ ಅಂದರೆ ಇಲ್ಲಿಯ ಮಠಾಧೀಶರು ಸರ್ಕಾರಿ ನೌಕರರು. ಇಲ್ಲಿಯ ಮಠಾಧೀಶರಾಗಿರುವ ವೀರಭದ್ರ ಶಿವಾಚಾರ್ಯರು 1986 ರಿಂದ ಸರ್ಕಾರಿ ನೌಕರಿಯಲ್ಲಿದ್ದಾರೆ.

ಅಂದಿನ ಕೆಇಬಿಯಲ್ಲಿ ಮೀಟರ್ ರೀಡರ್ ಆಗಿ ನೇಮಕವಾದ ಇವರು ಪ್ರಸ್ತುತ ಹೆಸ್ಕಾಂನಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಇಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರಭದ್ರ ಅವರನ್ನ ರಂಭಾಪುರಿಪೀಠದ ಶ್ರೀಗಳು 1998 ರಲ್ಲಿ ಲಿಂಗದಹಳ್ಳಿ ರಂಭಾಪುರಿ ವೀರಸೋಮೇಶ್ವರ ಸಂಸ್ಥಾನದ ಶಾಖಾ ಹಿರೇಮಠ ಪೀಠಾಧಿಪತಿಗಳನ್ನಾಗಿ ಮಾಡಿದ್ದಾರೆ.

ಸ್ಪಟಿಕಲಿಂಗ (ETV Bharat)

ಬಡ್ತಿ ಪಡೆಯದೆ ಸೇವೆ; ಶ್ರೀಗಳು 39 ವರ್ಷ ಸರ್ಕಾರಿ ನೌಕರರಾಗಿ ಕೆಲಸ ಮಾಡಿದ್ದು, 26 ವರ್ಷದಿಂದ ಮಠದ ಪೀಠಾಧಿಪತಿ ಮತ್ತು ಸರ್ಕಾರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2005ರಲ್ಲಿ ಶ್ರೀಗಳು ತಮ್ಮನ್ನ ಅರಸಿಬಂದ ಬಡ್ತಿಯನ್ನ ಸಹ ನಿರಾಕರಿಸಿದ್ದಾರೆ. 39 ವರ್ಷಗಳಿಂದ ಕೆಇಬಿಯಲ್ಲಿ ಪಡೆದ ವೇತನವನ್ನು ಶ್ರೀಗಳು ಮಠಕ್ಕೆ ವಿನಿಯೋಗಿಸಿದ್ದಾರೆ.

ಬಂದ ವೇತನದಲ್ಲಿ ದಾಸೋಹ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು; ಮಠದ ನಿರ್ವಹಣೆ, ಮಠದಲ್ಲಿನ ದಾಸೋಹಕ್ಕೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗಿದೆ. ಕಾಶಿ, ಶ್ರೀಶೈಲ, ಕೇದಾರ, ಉಜ್ಜೈನಿ ಮತ್ತು ರಂಭಾಪುರಿ ಶ್ರೀಗಳ ಆಶೀರ್ವಾದ ತಮ್ಮ ಮೇಲಿದೆ ಎನ್ನುತ್ತಾರೆ ವೀರಭದ್ರ ಶ್ರೀಗಳು.

ಸ್ಪಟಿಕಲಿಂಗ (ETV Bharat)

ಮುಂಜಾನೆ ನಾಲ್ಕು ಗಂಟೆಗೆ ಏಳುವ ಶ್ರೀಗಳು ತಮ್ಮ ದಿನನಿತ್ಯ ಪೂಜಾ ವಿಧಿವಿಧಾನ ಪೂರೈಸಿ ಆನಂತರ ತಮ್ಮ ಕರ್ತವ್ಯ ನಿರ್ವಹಿಸಲು ಕಚೇರಿಗೆ ತೆರಳುತ್ತಾರೆ. ಶ್ರೀಗಳ ಕರ್ತವ್ಯದ ಅವಧಿ ಒಂದು ವರ್ಷ 8 ತಿಂಗಳು ಇದ್ದು, ನಿವೃತ್ತಿಯಾದ ನಂತರ ದಿನದ 24 ಗಂಟೆ ಮಠದ ಏಳ್ಗೆಗೆ, ಸಮಾಜದ ಉದ್ಧಾರಕ್ಕೆ ದುಡಿಯುವೆ ಎಂದಿದ್ದಾರೆ.

ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಸ್ಪಟಿಕ ಲಿಂಗ; ವೀರಭದ್ರ ಶ್ರೀಗಳಿಗೆ ಲಿಂಗದಹಳ್ಳಿಯನ್ನ ಲಿಂಗಮಯ ಮಾಡಬೇಕು ಎನ್ನುವ ಮಹದಾಸೆ ಇದೆ. ಹೀಗಾಗಿ ಹಲವು ಲಿಂಗಗಳ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಮಠದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಪಟಿಕಲಿಂಗ ಸ್ಥಾಪನೆ ಮಾಡಿದ್ದಾರೆ. ಈ ಸ್ಪಟಿಕಲಿಂಗ ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡ ಸ್ಪಟಿಕ ಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂತಹ ಲಿಂಗುವಿನ ಆರಾಧನೆಯಿಂದ ಲೋಕಕಲ್ಯಾಣವಾಗುತ್ತೆ. ದಿನನಿತ್ಯ ಪೂಜೆ ಸಲ್ಲಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತವೆ ಎನ್ನುತ್ತಾರೆ ವೀರಭದ್ರಶ್ರೀಗಳು. ಶ್ರೀಗಳು ಸ್ಪಟಿಕಲಿಂಗ ಜೊತೆ ನಾಲ್ಕು ಪಚ್ಚೆಲಿಂಗಗಳನ್ನು ಸಹ ಸ್ಥಾಪಿಸಿದ್ದಾರೆ. ಮಠದಲ್ಲಿ 12 ಜ್ಯೋತಿರ್ಲಿಂಗಗಳ ದ್ವಾದಶಿ ಲಿಂಗಗಳನ್ನು ಸಹ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ, ಮಠ ಸೇರಿದಂತೆ ಗ್ರಾಮವನ್ನು ಲಿಂಗಮಯ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ.

ಶಿವಲಿಂಗ (ETV Bharat)

ಮಠದ ಆವರಣದಲ್ಲಿ ಸಾಲು ಸಾಲಾಗಿ ಹೊಂದಿಸಿ ಇಟ್ಟಿರುವ ಶಿವಲಿಂಗುಗಳು ಭಕ್ತರಲ್ಲಿ ದೈವಭಕ್ತಿ ಹೆಚ್ಚು ಮಾಡುತ್ತಿವೆ. ಶ್ರೀಗಳು ಗೋಶಾಲೆ ತೆರೆದಿದ್ದು, ಸುಮಾರು 10ಕ್ಕೂ ಅಧಿಕ ದೇಶಿಯ ಹಸುಗಳನ್ನು ಸಾಕಿದ್ದಾರೆ. ಗೀರ್, ಮಲ್ನಾಡ್​ಗಿಡ್ಡ, ಖಿಲಾರಿ ತಳಿಯ ಹಸುಗಳನ್ನು ಸಾಕಿದ್ದಾರೆ. ಇವುಗಳಲ್ಲಿ ಇತ್ತೀಚಿಗೆ ಆಂಧ್ರಪ್ರದೇಶದ ಪುಂಗೂರು ತಳಿಯ ಹಸು ಸಹ ಸೇರ್ಪಡೆಯಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ಪಟಿಕಲಿಂಗುವಿಗೆ ಹೈಟೆಕ್ ಭದ್ರತೆ ನೀಡಲಾಗಿದ್ದು,
ಮಠದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲಾಗಿದೆ.

1986ರಲ್ಲಿ ವೀರಭದ್ರಶ್ರೀಗಳು ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದರು. ಅಂದು ಕೆಇಬಿಯಲ್ಲಿ ಮೀಟರ್ ರೀಡರ್ ಕೆಲಸಕ್ಕೆ ಅರ್ಜಿ ಕರೆದಿದ್ದರು. ಐದು ಸಾವಿರ ಜನರು ಅರ್ಜಿ ಹಾಕಿದ್ದರು. ಅದರಲ್ಲಿ ಸ್ವಾಮೀಜಿಗೆ 12ನೇ ಸ್ಥಾನ ಸಿಕ್ಕಿತ್ತು. ಕೆಇಬಿಯಲ್ಲಿ ಮೀಟರ್ ರೀಡರ್ ಆಗಿ ನೇಮಕವಾದ ವೀರಭದ್ರಪ್ಪ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. 8 ವರ್ಷ ಹಲಗೇರಿ ಒಂದು ಡಿವಿಜನ್ ಮತ್ತು 8 ವರ್ಷ ಎರಡನೇ ಡಿವಿಜನ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಶ್ರೀಗಳನ್ನು ರಾಣೆಬೆನ್ನೂರು ಗ್ರಾಮಾಂತರ ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು.

ಇಟಗಿಯ ಹೆಸ್ಕಾಂ ಕಚೇರಿಯಲ್ಲಿ ಸೇವೆ; ಅಲ್ಲಿ ಎರಡೂವರೆ ವರ್ಷ ಕರ್ತವ್ಯ ನಿರ್ವಹಿಸಿದರು. ನಗರ ಡಿವಿಜನ್‌ನಲ್ಲಿ ಆರು ತಿಂಗಳು ಕಾರ್ಯನಿರ್ವಹಿಸಿದ ವೀರಭದ್ರ ಅವರಿಗೆ ನಂತರ ಮೇಲ್ವಿಚಾರಕ ಹುದ್ದೆ ನೀಡಿ ಹಲಗೇರಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ರಾಣೆಬೆನ್ನೂರು ತಾಲೂಕಿನ ಇಟಗಿ ಹೆಸ್ಕಾಂ ಕಚೇರಿಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಮಠದ ಮೂಲ ಕಾಶಿ ಕಲ್ಯಾಣಿಯಲ್ಲಿನ ಜಂಗಮಪುರದಲ್ಲಿತ್ತು. ಅಲ್ಲಿ 21 ಮಹಾಸ್ವಾಮಿಗಳ ನಂತರ ಈ ಮಠದ ಹಿರಿಯಸ್ವಾಮಿಗಳು ಕಾಶಿಯಿಂದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೆಳಮಲ್ಲಿಗೆ 1126ರಲ್ಲಿ ಆಗಮಿಸಿದರು. ಅದಾದ ನಂತರ 15 ನೇ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಶ್ರೀಗಳ ಪೂರ್ವಜರನ್ನ ಲಿಂಗದಳ್ಳಿ ಗ್ರಾಮಸ್ಥರು 18 ನೇ ಶತಮಾನದಲ್ಲಿ ಲಿಂಗದಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ :ಗದಗದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ 3 ಕೋಟಿ ಶಿವಲಿಂಗ ಸ್ಥಾಪನೆಗೆ ಭೂಮಿ ಪೂಜೆ

ABOUT THE AUTHOR

...view details