ಕರ್ನಾಟಕ

karnataka

ETV Bharat / state

ವರಮಹಾಲಕ್ಷ್ಮಿ ಹಬ್ಬ: ಹೂವು, ಹಣ್ಣು ತುಟ್ಟಿಯಾದ್ರೂ ಖರೀದಿಗೆ ಮುಗಿಬಿದ್ದ ಗ್ರಾಹಕರು - Varamahalakshmi Festival Price Hike - VARAMAHALAKSHMI FESTIVAL PRICE HIKE

ಶುಕ್ರವಾರ ನಡೆಯಲಿರುವ ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್ ಸೇರಿದಂತೆ ಹಲವೆಡೆ ಗ್ರಾಹಕರ ಖರೀದಿ ಭರಾಟೆ ಜೋರಾಗಿತ್ತು.

Flower, fruit, vegetable prices rise
ಜನತಾ ಬಜಾರ್ (ETV Bharat)

By ETV Bharat Karnataka Team

Published : Aug 15, 2024, 4:25 PM IST

Updated : Aug 15, 2024, 5:19 PM IST

ಗ್ರಾಹಕರ ಖರೀದಿ ಭರಾಟೆ (ETV Bharat)

ಹುಬ್ಬಳ್ಳಿ:ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಬ್ಬದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್ ಸೇರಿದಂತೆ ಹಲವೆಡೆ ಜನಜಂಗುಳಿ ಕಂಡುಬಂತು.

ಎಪಿಎಂಸಿ ಮಾರುಕಟ್ಟೆ, ಗಾಂಧಿ ಮಾರುಕಟ್ಟೆ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಬೆಂಗೇರಿ ಸೇರಿದಂತೆ ಇತರೆ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಜನರು ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿ ಖರೀದಿಸುತ್ತಿದ್ದರು.

ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಹೂವಿನ ಬೆಲೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಸೇವಂತಿಗೆ, ಮಲ್ಲಿಗೆ ಹೂವಿನ ಬೆಲೆ ಗಗನಕ್ಕೇರಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ‌ ಬಿಸಿ (ETV Bharat)

ಹಣ್ಣುಗಳ ದರ ಹೀಗಿದೆ: ಸೇಬು ದರ ಕೆಜಿಗೆ 200-260 ರೂಪಾಯಿ, ಪಚ್ಚಬಾಳೆ ಕೆಜಿಗೆ 40-70, ಏಲಕ್ಕಿ ಬಾಳೆಹಣ್ಣು ಕೆಜಿಗೆ 100-150, ಕಿತ್ತಾಳೆ ಕೆಜಿಗೆ 150-200, ಮೂಸಂಬಿ ಕೆಜಿಗೆ 90-130 ರೂ.ಗೆ ಮಾರಾಟವಾಗುತ್ತಿದೆ.

ಇದು ಹೂವುಗಳ ದರ: ಪ್ರತಿ ಕೆಜಿಗೆ 1,500 ರೂ ಇದ್ದ ಕನಕಾಂಬರ 2500-2700 ರೂ.ಗೆ ಏರಿಕೆಯಾಗಿದೆ. ಮಳ್ಳೆ ಹೂವು 1200 ರೂ, ಮಲ್ಲಿಗೆ 2,000 ಸಾವಿರ ರೂ, ಕಾಕಡ ಮಲ್ಲಿಗೆ 800-900 ರೂ, ಗುಲಾಬಿ 300 ರೂ, ಮಾರಿಗೋಲ್ಡ್ 300 ರೂ ಹಾಗೂ ಮಲ್ಲಿಗೆ ಹಾರ ಒಂದಕ್ಕೆ 500-600 ರೂ.ಗೆ ಮಾರಾಟವಾಗುತ್ತಿದೆ.

ಪೂಜಾ ಸಾಮಗ್ರಿ ಅಂಗಡಿಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು. ದೇವರ ಮಂಟಪವನ್ನು ಅಲಂಕರಿಸಲು ಹಾಗು ಮನೆ ಮುಂದೆ ತೋರಣ ಕಟ್ಟಲು ಬಾಳೆದಿಂಡು, ಮಾವಿನ ಸೊಪ್ಪು, ಹೂವು ಹಾಗೂ ಹಣ್ಣುಗಳನ್ನು ಜನರು ಖರೀದಿಸುತ್ತಿದ್ದರು.

ಹುಬ್ಬಳ್ಳಿಯ ಜನತಾ ಬಜಾರ್ (ETV Bharat)

ಮಾರಾಟಗಾರರ ಪ್ರತಿಕ್ರಿಯೆ: "ಹೂವಿನ ದರ ಹೆಚ್ಚಾಗಿದೆ. ಗ್ರಾಹಕರಿಗೆ ಸ್ವಲ್ಪ ಹೊರೆಯೆನಿಸಿದರೂ, ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ. ಆದರೆ, ಗ್ರಾಹಕರು ಹೂವು, ಹಣ್ಣುಗಳನ್ನು ಕಡಿಮೆ ದರದಲ್ಲಿ ಕೇಳುತ್ತಾರೆ. ಎಪಿಎಂಸಿಯಲ್ಲಿ ಹೆಚ್ಚು ಹಣ ಕೊಟ್ಟು ತಂದಿರುತ್ತೇವೆ. ಇಲ್ಲಿ ಮಾರು ಹೂವುಗೆ 80-100 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಇವತ್ತು, ನಾಳೆ ಹಬ್ಬ ಇರುವುದಿಂದ ಗ್ರಾಹಕರು ಹೆಚ್ಚಾಗಿ ಆಗಮಿಸುತ್ತಿದ್ದಾರೆ" ಎಂದು ಮಾರಾಟಗಾರರಾದ ಶಾವಕ್ಕ ತಿಳಿಸಿದರು.

ಗ್ರಾಹಕರು ಹೇಳುವುದೇನು?: "ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬದ ಅಂಗವಾಗಿ ಹೂವು, ಹಣ್ಣಿನ ದರ ಗಗನಕ್ಕೇರಿದೆ. ಪ್ರತಿ ಸಲವೂ ಇದು ಮಾಮೂಲಿ. ಆದರೂ, ಹಬ್ಬಕ್ಕೆ ಎಷ್ಟು ಬೇಕೋ ಅಷ್ಟನ್ನು ಖರೀದಿಸಲೇಬೇಕು. ದರ ಏರಿಕೆಯಾಗಿದೆ ಎಂದು ಹಬ್ಬ ಆಚರಿಸುವುದನ್ನು ಬಿಡುವುದಕ್ಕೆ ಆಗುವುದಿಲ್ಲ" ಎಂದು ಗ್ರಾಹಕರಾದ ರವಿ ಡೊಂಬರ್ ಹೇಳಿದರು.

ಇದನ್ನೂ ಓದಿ:30 ಗುಂಟೆ ಜಮೀನು, 6 ತಿಂಗಳಲ್ಲಿ 5 ಲಕ್ಷ ರೂ. ಆದಾಯ: ಹಾವೇರಿ ರೈತನ ಮಾದರಿ ಸೇವಂತಿ ಕೃಷಿ

Last Updated : Aug 15, 2024, 5:19 PM IST

ABOUT THE AUTHOR

...view details