ಬೆಂಗಳೂರು: ಅತ್ಯಾಧುನಿಕ ಸೌಲಭ್ಯದ 'ವಂದೇ ಭಾರತ್ ಸ್ಲೀಪರ್' ಕ್ಲಾಸ್ ಬೋಗಿಯ ನಿರ್ಮಾಣ ಕಾರ್ಯವನ್ನು ಬಿಇಎಂಎಲ್ ಭರದಿಂದ ನಡೆಸುತ್ತಿದ್ದು, ಆರು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ. ಶನಿವಾರ ಬೋಗಿಯ ಒಳವಿನ್ಯಾಸ ನಿರ್ಮಾಣ ಹಂತವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ವಂದೇ ಭಾರತ್ (ಚೇರ್‌ಕಾರ್), ನಮೋ ಭಾರತ್ (ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಂ) ಹಾಗೂ ಅಮೃತ್ ಭಾರತ್ (ಪುಶ್‌ಪುಲ್ ಟೆಕ್ನಾಲಜಿ) ರೈಲುಗಳ ಯಶಸ್ಸಿನ ಬಳಿಕ ಇದೀಗ ವಂದೇ ಭಾರತ್ ಸರಣಿಯ ಸ್ಲೀಪರ್ ರೈಲು ಶೀಘ್ರವೇ ಪ್ರಯಾಣಿಕರಿಗೆ ಲಭ್ಯವಾಗಲಿದೆ.
"ವಂದೇ ಭಾರತ್ ಸ್ಲೀಪರ್ ಕ್ಲಾಸ್" ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿ ನಿರ್ಮಾಣವಾಗುತ್ತಿದೆ. 16 ಬೋಗಿಯ ರೈಲು ಇದಾಗಿದೆ. ಒಂದು ಬೋಗಿಯಲ್ಲಿ ಕನಿಷ್ಠ 67 ಜನ ಪ್ರಯಾಣಿಸಬಹುದು. ಎಸಿ 3 ಟೈರ್ ಬರ್ತ್‌ಗಳ 11 ಬೋಗಿಯಲ್ಲಿ 611 ಆಸನ ಇರಲಿದೆ. ಎಸಿ 2 ಟೈರ್ ಬರ್ತ್‌ಗಳ 4 ಬೋಗಿ ನಿರ್ಮಾಣವಾಗುತ್ತಿದ್ದು, 188 ಆಸನ ವ್ಯವಸ್ಥೆ ಇರಲಿದೆ. ಮೊದಲ ದರ್ಜೆ ಎಸಿ ಬರ್ತ್ 1 ಬೋಗಿಯಲ್ಲಿ 24 ಆಸನ ಇರಲಿದೆ.
ಸಂಪೂರ್ಣ ಹೊಸ ವಿನ್ಯಾಸದಲ್ಲಿ ಈ ರೈಲು ನಿರ್ಮಾಣ ಆಗುತ್ತಿದೆ. ರೈಲಿನ ನಿರ್ಮಾಣ ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದ್ದು, ನಾಲ್ಕರಿಂದ ಆರು ತಿಂಗಳ ಕಾಲ ವಿವಿಧ ರೀತಿಯ ತಪಾಸಣೆಗೆ ಒಳಪಡಲಿದೆ. ಬಳಿಕ ಅಗತ್ಯ ಬದಲಾವಣೆ ಜೊತೆಗೆ ಇನ್ನಷ್ಟು ರೈಲುಗಳು ನಿರ್ಮಾಣವಾಗಲಿವೆ.
ಬಿಇಎಂಎಲ್ 10 ರೈಲುಗಳನ್ನು (160 ಬೋಗಿ) ನಿರ್ಮಿಸಿ ಕೊಡಲಿದೆ. ಈಗಿನ ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್ ರೈಲು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರಿತ ಹವಾನಿಯಂತ್ರಣ ವ್ಯವಸ್ಥೆ, ವೈರಸ್ ನಿಯಂತ್ರಣ ಮೆಕ್ಯಾನಿಸಂ ಇರಲಿದೆ. ತೀರಾ ಕಡಿಮೆ ಅಲುಗಾಟ ಹಾಗೂ ಕಂಪನ ವ್ಯವಸ್ಥೆ ಇರುವುದರಿಂದ ಜನ ಆರಾಮವಾಗಿ ನಿದ್ರಿಸಿ ಪ್ರಯಾಣಿಸಬಹುದು. ವಂದೇ ಭಾರತ್ ಸರಣಿಯ ಇತರೆ ರೈಲುಗಳ ಪ್ರಯಾಣಿಕರಿಂದ ಬಂದ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನಿಸಿ ಆ ಸಮಸ್ಯೆಗಳನ್ನು ಈ ರೈಲಿನಲ್ಲಿ ನಿವಾರಿಸಲಾಗುತ್ತಿದೆ.