ಬೆಂಗಳೂರು :ಲೋಕಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟು 2.83 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 240 ಎಫ್ಐಆರ್ ದಾಖಲಾಗಿವೆ. ಕೇಂದ್ರ ಚುನಾವಣಾ ಆಯೋಗದಿಂದ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಬಳಿಕ ನೀತಿ ಸಂಹಿತಿ ಜಾರಿಯಾಗಿತ್ತು. ನಗರದಾದ್ಯಂತ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ ನಿಂದ ತಪಾಸಣೆ ಆರಂಭಿಸಲಾಗಿತ್ತು.
ಇಂದಿನವರೆಗೂ ಬೆಂಗಳೂರಿನಲ್ಲಿ ಒಟ್ಟು 67 ಲಕ್ಷ ನಗದು, 1.54 ಕೋಟಿ ಮೌಲ್ಯದ ಮದ್ಯ, 3.96 ಲಕ್ಷ ಮೌಲ್ಯದ ಮಾದಕ ಪದಾರ್ಥ, 37.50 ಲಕ್ಷ ಮೌಲ್ಯದ ಚಿನ್ನ/ಬೆಳ್ಳಿ, 6.05 ಲಕ್ಷ ಮೌಲ್ಯದ ಉಡುಗೊರೆ ವಸ್ತುಗಳು, 14.65 ಲಕ್ಷ ಮೌಲ್ಯದ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಒಟ್ಟು 240 ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನವಲಗುಂದ - ರೋಣ ಚೆಕ್ ಪೋಸ್ಟ್:ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ಮಾತ್ರ ನಗದು ಸಹಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಗೋಕಾಕದಿಂದ ಕುರ್ತುಕೋಟಿಗೆ ಹೋಗುವ ಗೂಡ್ಸ್ ವಾಹನ (ಕೆಎ-63 ಎ 2739) ಪರಿಶೀಲಿಸಲಾಗಿದ್ದು, ಕುರ್ತಕೋಟಿ ಗ್ರಾಮದ ಪರಶುರಾಮ ದೇವಪ್ಪ ಕೊರವರ ಎಂಬವರ ಬಳಿ 73,670 ರೂ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಗಳಿಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು.