ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರದ್ದು ಆತ್ಮಹತ್ಯೆಯಲ್ಲ. ಅದು ಸರ್ಕಾರ ಪ್ರಾಯೋಜಿತ ಕೊಲೆ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ವಿಧಾನಸಭೆಯಲ್ಲಿ ಸೋಮವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಕುರಿತು ನಿಯಮ 69ರಡಿ ಚರ್ಚೆ ನಡೆಸಿ ಮಾತನಾಡಿದ ಅವರು, 187 ಕೋಟಿ ದಲಿತರ ಹಣ ಲೂಟಿ ಹೊಡೆದು ಬೇರೆ ರಾಜ್ಯಕ್ಕೆ ಕಳುಹಿಸಿದ ಉದಾಹರಣೆ ಇಲ್ಲ. ಕಟಾಕಟ್ ಅಂತಾ 187 ಕೋಟಿ ಹಗರಣ ಮಾಡಿರುವುದು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಬೇಲಿನೇ ಎದ್ದು ಹೊಲ ಮೇಯ್ದ ರೀತಿ ಆಗಿದೆ. ನಿಗಮದ ಎಂಡಿನೇ ದಲಿತರ ಹಣ ಲೂಟಿ ಮಾಡಿದ್ದಾರೆ. ಸಂದರ್ಭವನ್ನು ದುರುಪಯೋಗ ಮಾಡಿ ಗೋಲ್ಮಾಲ್ ಮಾಡಿದ್ದಾರೆ. ಮೃತ ಅಧಿಕಾರಿಯೂ ದಲಿತ. ಲೂಟಿ ಹೊಡೆದವನೂ ದಲಿತ. ಸರ್ಕಾರ ನಾವು ದಲಿತರ ಚಾಂಪಿಯನ್ ಅಂತ ಹೇಳುತ್ತೆ. ದಲಿತರ ಹಣ ಟಕಾಟಕ್ ವರ್ಗಾವಣೆ ಆಯ್ತಾ ಅಲ್ಲ. ಸರ್ಕಾರ ಕಣ್ಣು ಮುಚ್ಚಿ ಕೂತಿದೆಯಾ ಎಂದು ಪ್ರಶ್ನಿಸಿದರು.
ಸಿಎಂ ಹೆಡ್ ಮಾಸ್ಟರ್ ಕೈಚೆಲ್ಲಿ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗ ಮೊದಲಿನಂತೆ ಇಲ್ಲ. ಈಗ ಯಾರ ಮಾತು ಕೇಳುತ್ತಾರೋ ಗೊತ್ತಿಲ್ಲ. ಅಮಾಯಕ ಅಧಿಕಾರಿ ಪ್ರಮಾಣಿಕ ಅಧಿಕಾರಿಯಾಗಿದ್ದರು. ಈ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ. ಇದು ಸ್ವತಃ ಸಿಎಂ ನಿರ್ವಹಿಸುವ ಹಣಕಾಸು ಇಲಾಖೆ ಅಡಿ ಬರುವ ನಿಗಮವಾಗಿದೆ. ಇದು ಪೂರ್ವ ಯೋಜಿತ ಹಗರಣ. ಶಾಂಗ್ರೀಲಾ ಹೊಟೇಲ್ ಇದಕ್ಕೆ ಹೆಡ್ ಆಫೀಸ್. ಅಲ್ಲೇ ಎಲ್ಲ ತೀರ್ಮಾನ ಆಗಿರುವುದು. ಅಲ್ಲಿ ಆಗಿರುವ ಡೀಲ್ ಇದು. ಚುನಾವಣೆಗೆ ಹಣ ಬೇಕಿತ್ತು. ಟಾಕಾಟಕ್ ಅಂತ ವರ್ಗಾವಣೆ ಆಯಿತು ಎಂದು ದೂರಿದರು.
ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯಲ್ಲ. ಇದು ಸರ್ಕಾರ ಪ್ರಾಯೋಜಿತ ಕೊಲೆ ಆಗಿದೆ. ದಲಿತರ ದುಡ್ಡು, ಯಾರದ್ದೋ ಮೋಜು ಮಸ್ತಿಗಾಗಿ ಬಳಕೆಯಾಯಿತು. ಸತ್ತ ದಲಿತ ವ್ಯಕ್ತಿಯ ಬೆಲೆ ಇಲ್ವಾ?, ಸರ್ಕಾರ ಕುರುಡಾಯಿತಾ?, 187 ಕೋಟಿ ರೂ. ಅನ್ನು ಅವನು ಉಳಿಸಿದ್ದಾನೆ. ಸತ್ತ ವ್ಯಕ್ತಿಯ ಶಾಪತಟ್ಟದೇ ಇರುತ್ತಾ?, ಪಿಎ ಮನೆಯಲ್ಲಿ, ಚಿನ್ನದ ಅಂಗಡಿಯಲ್ಲಿ ಹಣ ಸಿಕ್ಕಿದೆ. ಇದು ಹಗರಣ ಅಲ್ಲ ಅಂತ ಯಾರೂ ಹೇಳಲು ಆಗುವುದಿಲ್ಲ. ಮೃತ ಅಧಿಕಾರಿ ಯಾವ ದುಡ್ಡನ್ನೂ ಹೊಡೆದಿಲ್ಲ. ಆ ಅಮಾಯಕನನ್ನು ಬಲಿ ಪಡೆದರಲ್ಲಾ? ಎಂದು ಕಿಡಿಕಾರಿದರು.
ಡಿಕೆಶಿ ಕ್ಲೆವರ್ ರಾಜಕಾರಣಿ. ಅವರು ಸುದ್ದಿಗಾರರಿಗೆ ಸಂದೇಶ ಕೊಟ್ಟಿದ್ದಲ್ಲ, ಅವರು ಪೊಲೀಸರಿಗೆ ಸಂದೇಶ ಕೊಟ್ಟಿದ್ದು ಅನ್ನಿಸುತ್ತೆ. ಸಿಎಂ ಅವರು ಆ ತರದ ಹೇಳಿಕೆ ಕೊಟ್ಟಿಲ್ಲ ಎಂದು ಅಶೋಕ್ ಟಾಂಗ್ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್, ನಾನು ಈಗಲೂ ಹೇಳುತ್ತೇನೆ, ಅವರು ಏನೂ ತಪ್ಪು ಮಾಡಿಲ್ಲ. ನಾನು ನಾಗೇಂದ್ರರನ್ನು ಕರೆಸಿ ಮಾತನಾಡಿದ್ದೇನೆ. ಅವರು ನನ್ನದೇನು ಪಾತ್ರ ಇಲ್ಲ ಅಂದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಈಗಲೂ ಅದನ್ನೇ ಹೇಳುತ್ತೇನೆ ಎಂದು ಪುನರುಚ್ಚರಿಸಿದರು.