ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ನಡೆದಿರುವ ಕುರಿತಂತೆ ನಿಯಮ 59ರದಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯ ಸಿ.ಟಿ.ರವಿ ವಿಧಾನ ಪರಿಷತ್ನಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಸಭಾಪತಿಗಳು ಚರ್ಚೆಗೆ ಅನುಮತಿ ನೀಡಿಲ್ಲ, ಈಗ ಯಾಕೆ ಪ್ರಸ್ತಾಪ ಮಾಡುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು ಆಕ್ಷೇಪಿಸಿದರು. ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷಗಳು ಆರೋಪ-ಪ್ರತ್ಯಾರೋಪದ ಸುರಿಮಳೆ ಸುರಿಸಿದರು.
ಈ ವೇಳೆ ಗೃಹ ಸಚಿವ ಪರಮೇಶ್ವರ್ ಅವರು ಮಧ್ಯಪ್ರವೇಶಿಸಿ ವಾಲ್ಮೀಕಿ ಅಭಿವೃದ್ದಿ ನಿಗಮ ಅವ್ಯವಹಾರ ಸಂಬಂಧ ಎಸ್ಐಟಿ ತಂಡ ರಚಿಸಲಾಗಿದೆ. ಸಿಬಿಐ ಕೂಡಾ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಕೊಂಡು ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆ ನಿಯಮ 59ರಡಿ ಚರ್ಚೆಗೆ ಅವಕಾಶ ನೀಡಕೂಡದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.
ಬಳಿಕ ಸಿ.ಟಿ.ರವಿ ರವಿ ಮಾತನಾಡಿ, ವಾಲ್ಮೀಕಿ ನಿಗಮ ಅವ್ಯವಹಾರ ಸಂಬಂಧ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ. ಇದರಿಂದ ವಾಲ್ಮೀಕಿ ಸಮುದಾಯಕ್ಕೆ ಅಪಾರ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ಅವಕಾಶ ನೀಡಬೇಕು. ನಿಲುವಳಿ ಮಂಡಿಸಲು ಅವಕಾಶ ಸಭಾಪತಿಯವರ ವಿವೇಚನೆಗಿದೆ. ಹೀಗಾಗಿ ನಿಲುವಳಿ ಮಂಡಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಅವ್ಯವಹಾರದ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆಯಂತೆ ನಿಯಮ 59ರಡಿ ಚರ್ಚೆಗೆ ಅವಕಾಶವಿಲ್ಲ. ಇದನ್ನ ಖಚಿತಪಡಿಸಿಕೊಳ್ಳಲು ಅಡ್ವೋಕೇಟ್ ಜನರಲ್ ಬಳಿ ಸಲಹೆ ಪಡೆದು ನಾಳೆಗೆ ಈ ಬಗ್ಗೆ ಸ್ಪಷ್ಪಪಡಿಸುತ್ತೇನೆ ಎಂದರು.