ಬೆಂಗಳೂರು:ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಇಂಡಿಯಾ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಆರಂಭಿಸಿದ್ದು, ಮುಂದಿನ ವಿಚಾರಣೆಯ ವೇಳೆಗೆ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ವಾಲ್ಮೀಕಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಬಿಜೆಪಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಬಿಐ ಪ್ರತಿನಿಧಿಸಿದ್ದ ವಕೀಲರು, ತನಿಖೆಯ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ರಜಾಕಾಲದ ಬಳಿಕ ವಿಚಾರಣೆ ನಡೆಸಬಹುದು. ಮೂರು ವಾರಗಳ ಬಳಿಕ ಹೆಚ್ಚಿನ ತನಿಖೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸಲಾಗುವುದು ಎಂದರು.
ವರದಿ ಪರಿಶೀಲಿಸಿದ ಪೀಠ, ಸಿಬಿಐ ಪರ ವಕೀಲರು ಸಲ್ಲಿಸಿರುವ ವರದಿ ಪರಿಶೀಲಿಸಲಾಗಿದೆ. ಅದರಲ್ಲಿ ತನಿಖೆ ಆರಂಭವಾಗಿದೆ ಎಂದು ಹೇಳಲಾಗಿದೆ. ತನಿಖೆಯ ಮುಂದಿನ ಸ್ಥಿತಿಗತಿಯನ್ನು ಮುಂದಿನ ವಿಚಾರಣೆಯ ವೇಳೆಗೆ ಸಿಬಿಐ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿದೆ.