ಬೆಂಗಳೂರು:ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಇಂದು ವಶಕ್ಕೆ ಪಡೆದಿದ್ದಾರೆ. ನಗರದ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ವಶಕ್ಕೆ ಪಡೆದಿರುವ ಅಧಿಕಾರಿಗಳು, ಶಾಂತಿನಗರದ ಕಚೇರಿಗೆ ಕರೆದೊಯ್ದರು.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು ಇತ್ತೀಚಿಗೆ ನಾಗೇಂದ್ರರನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ನಾಳೆ ಕಸ್ಟಡಿ ಅವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣ: ಆರೋಪಿ ನಾಗೇಂದ್ರಗೆ ಚಿಕಿತ್ಸೆ ಕೋರಿರುವ ಅರ್ಜಿ ಜುಲೈ 18ಕ್ಕೆ ವಿಚಾರಣೆ - Valmiki Corporation Scam
ಪ್ರಕರಣವೇನು?:ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಎಂಬವರು ಶಿವಮೊಗ್ಗದಲ್ಲಿ ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ನಿಗಮದಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಚಂದ್ರಶೇಖರನ್ ಬರೆದಿದ್ದ ಡೆತ್‌ನೋಟ್‌ನಲ್ಲಿ ಸತ್ಯನಾರಾಯಣ ವರ್ಮ, ಸಾಯಿತೇಜ್ ಹೆಸರುಗಳಿದ್ದವು. ಸದ್ಯ ಸಾಯಿತೇಜ್ ಎಂಬವರನ್ನು ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿದೆ.
ನೂರಾರು ಖಾತೆಗಳಿಗೆ ಹಣ ವರ್ಗಾವಣೆ: ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ತನಿಖೆ ನಡೆಸಿರುವ ಎಸ್‌ಐಟಿ, ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಇದೀಗ 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಆರಂಭದಲ್ಲಿ 18 ಖಾತೆಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿದೆ ಎಂದು ಗೊತ್ತಾಗಿತ್ತು. ಆದರೆ, ಈಗ ನೂರಾರು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.