ಹುಬ್ಬಳ್ಳಿ:ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿಯನ್ನು 2027ರ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.
ನಗರದ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ರೈಲ್ವೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, "ಹೊಸಪೇಟೆ - ಹುಬ್ಬಳ್ಳಿ - ಲೋಂಡಾ - ವಾಸ್ಕೋಡ ಗಾಮ ಜೋಡಿ ಮಾರ್ಗದ ಪೂರ್ಣಗೊಳಿಸಲಾಗುತ್ತಿದೆ. ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಬಗ್ಗೆ ವಿವರವಾದ ಯೋಜನಾ ವರದಿ (DPR) ಸಿದ್ಧವಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯಿಂದ Rapid action report & Integrated transport plan ಕರ್ನಾಟಕ ಸರ್ಕಾರದಿಂದ ಅಕ್ಟೋಬರ್-2024 ಮಧ್ಯದಲ್ಲಿ ನಿರೀಕ್ಷಿಸಲಾಗಿದೆ. ಮತ್ತು ವಿವರವಾದ ಯೋಜನಾ ವರದಿಯನ್ನು ನವೆಂಬರ್ 24ರೊಳಗೆ ಸಲ್ಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಗಿಣಿಗೇರಾ-ರಾಯಚೂರು ಹೊಸ ಮಾರ್ಗ, ಕಡೂರು-ಚಿಕ್ಕಮಗಳೂರು ಹೊಸ ಮಾರ್ಗ, ಬಾಗಲಕೋಟೆ-ಕುಡಚಿ ಹೊಸ ಮಾರ್ಗ, ಧಾರವಾಡ-ಬೆಳಗಾವಿ ಹೊಸ ಮಾರ್ಗ, ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗ, ರಾಯದುರ್ಗ-ತುಮಕೂರು ಹೊಸ ಮಾರ್ಗ, ಗದಗ-ವಾಡಿ ಹೊಸ ಮಾರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ಮಾರ್ಗ, ಬಾಗಲಕೋಟೆ-ಕುಡಚಿ ಹೊಸ ಮಾರ್ಗ, ಹಾಸನ-ಬೇಲೂರು ಹೊಸ ಮಾರ್ಗ, ಶಿವಮೊಗ್ಗ-ಶಿಕಾರಿಪುರ - ರಾಣೆಬೆನ್ನೂರ, ಹೊಟಗಿ-ಕುಡ್ಗಿ-ಗದಗ ದ್ವಿಪಥ, ಭೂಸ್ವಾಧೀನ, ಡಿಪಿಆರ್, ಟೆಂಡರ್ ಪ್ರಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಯೋಜನೆಗಳನ್ನು ಅವುಗಳ ಪೂರ್ವನಿರ್ಧರಿತ ಸ್ಥಿತಿಯೊಂದಿಗೆ ವಿವರವಾಗಿ ಚರ್ಚಿಸಲಾಯಿತು. ಮತ್ತು ಆದ್ಯತೆಯ ಆಧಾರದ ಮೇಲೆ ಜೂನ್ 2027ರೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೆ ಸಚಿವರು ಎಲ್ಲಾ ರೈಲ್ವೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಹಾಗೇ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಕುಂದು ಕೊರತೆಗಳನ್ನು ತೆರವುಗೊಳಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.