ಉತ್ತರ ಕನ್ನಡ:ಈ ಬಾರಿಯ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ್ ಹೆಗಡೆ ಜಯಭೇರಿ ಬಾರಿಸಿದ್ದಾರೆ. ಮತಗಳ ಮಾಹಿತಿ ಈ ಕೆಳಗಿನಂತಿದೆ..
- ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ- 3,37,872 ಮತಗಳ ಅಂತರದ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್- ಸೋಲು
- ವಿಶ್ವೇಶ್ವರ ಹೆಗಡೆ ಕಾಗೇರಿ ಪಡೆದ ಮತಗಳು- 7,80,494
- ಡಾ.ಅಂಜಲಿ ನಿಂಬಾಳ್ಕರ್ ಪಡೆದ ಮತಗಳು- 4,42,622
ಮೂರು ದಶಕಗಳಿಂದ ಬಿಜೆಪಿ ಭದ್ರಕೋಟೆ ಆಗಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಕಠಿಣ ಸ್ಪರ್ಧೆ ನೀಡುವಂತೆ ಕಾಣುತ್ತಿತ್ತು. ಅಂದುಕೊಂಡಂತಹ ರೀತಿಯಲ್ಲಿ ಪೈಪೋಟಿ ನೀಡಲು ಕಾಂಗ್ರೆಸ್ಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 3,37,872 ಮತಗಳ ಅಂತರದಿಂದ ಭಾರಿ ಗೆಲುವು ದಾಖಲಿಸಿದ್ದಾರೆ. ಸದ್ಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಭಾರಿ ಸೋಲು ಉಂಟಾಗಿದೆ.
ಇತಿಹಾಸದಲ್ಲಿಯೇ ಗರಿಷ್ಠ ಮತದಾನ:ಮೇ 7ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ಇತಿಹಾಸದಲ್ಲಿಯೇ ಗರಿಷ್ಠ ಶೇ. 76.53 ರಷ್ಟು ಮತದಾನ ದಾಖಲಾಗಿದೆ. ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಇತ್ತು. ಆದರೆ, ಕಾಂಗ್ರೆಸ್ ಹುರಿಯಾಳು ಡಾ.ಅಂಜಲಿ ನಿಂಬಾಳ್ಕರ್ ಗೆಲುವಿನ ನಿರೀಕ್ಷೆ ಹುಸಿಯಾಗಿದೆ. ಮೂರು ದಶಕಗಳ ಬಳಿಕ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡಲು ಕ್ಷೇತ್ರದಾದ್ಯಂತ ಭಾರಿ ಪ್ರಚಾರ ಕೈಗೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ಬಾರಿ 2019ರಲ್ಲಿ 74.10 ರಷ್ಟು ಮತದಾನ ನಡೆದಿತ್ತು.