ಬೆಂಗಳೂರು:ಸಾಫ್ಟ್‌ವೇರ್ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕರ ಫೋಟೋ ಹಾಗೂ ಕಂಪನಿಯ ಲೋಗೋ ಬಳಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಆರು ಆರೋಪಿಗಳನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ತೆಲಂಗಾಣದ ಗ್ರೀಷ್ಮಾ, ಎನ್.ದಿನೇಶ್ ಹರಾತ್, ಪವನ್ ಕುಮಾರ್, ಸಾಯಿ ಕುಮಾರ್ ಎನುಮುಲಾ ಬಂಧಿತರು.
ವಂಚಿಸಿದ್ದು ಹೀಗೆ: ಸಾಫ್ಟ್‌ವೇರ್ ಕಂಪನಿಯ ಲೋಗೋ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಫೋಟೋವನ್ನು ಡಿಪಿಯಲ್ಲಿ ಇರಿಸಲಾಗಿದ್ದ ವಾಟ್ಸ್‌ಆ್ಯಪ್ ನಂಬರ್ನಿಂದ ಡಿಸೆಂಬರ್ 6ರಂದು ಆ ಕಂಪನಿಯ ಅಕೌಂಟೆಂಟ್‌ಗೆ ಆರೋಪಿಗಳು ಸಂದೇಶ ಕಳಿಸಿದ್ದರು. ಪ್ರಾಜೆಕ್ಟ್ ಅಡ್ವಾನ್ಸ್ ಸೆಕ್ಯೂರಿಟಿ ಡೆಪಾಸಿಟ್‌ಗಾಗಿ ತುರ್ತಾಗಿ 56 ಲಕ್ಷ ರೂ ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಸಂದೇಶ ನಿಜವೆಂದು ನಂಬಿದ್ದ ಅಕೌಂಟೆಂಟ್, ಕಂಪನಿಯ ಖಾತೆಯಿಂದ ಆರೋಪಿಗಳು ಸೂಚಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿವರಿಸಿದಾಗ ತಾವು ವಂಚನೆಗೊಳಗಾಗಿರುವುದು ತಿಳಿದು ಆಗ್ನೆಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಹೈದರಾಬಾದ್ ಮೂಲದ ಖಾತೆ ಹೊಂದಿದ್ದ ಓರ್ವ ಆರೋಪಿಯನ್ನು ಮೊದಲು ಬಂಧಿಸಿದ್ದರು. ವಿಚಾರಣೆ ಕೈಗೊಂಡಾಗ ಆತ ನೀಡಿದ ಮಾಹಿತಿ ಆಧರಿಸಿ ಇತರೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಂಚಿಸಿದ ಹಣವನ್ನು ವಿತ್‌ಡ್ರಾ ಮಾಡಿ ಬಿಟ್ ಕಾಯಿನ್ ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.