ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಬಣ್ಣದ ಟ್ರಿನಿಟಿ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ಸ್ಥಳವಕಾಶವಿಲ್ಲದೆ ತಾಯಿಯೊಬ್ಬಳು ಪರದಾಡಿದಂತಹ ಘಟನೆ ಇತ್ತೀಚಿಗೆ ನಡೆದಿತ್ತು. ಅದಾದ ಬಳಿಕ ಎಲ್ಲ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ನಿಲ್ದಾಣಗಳಲ್ಲಿ ಮಗುವಿಗೆ ಹಾಲುಣಿಸಲು ಕೇಂದ್ರವನ್ನು ಸ್ಥಾಪಿಸಬೇಕೆಂಬ ಒತ್ತಾಯ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
ಹಾಲುಣಿಸಲು ಸರಿಯಾದ ಸ್ಥಳವಕಾಶವಿಲ್ಲದೆ ಆ ತಾಯಿ, ಸುತ್ತಮುತ್ತ ಸ್ಥಳ ಹುಡುಕಿ ಬಳಿಕ ಪ್ಲಾಟ್‌ಫಾರ್ಮ್ ಬಳಿಯ ಮರೆಯಲ್ಲಿ ಹಾಲುಣಿಸಿದ್ದರು. ಆ ವೇಳೆ ಆಕೆಗೆ ಮಾವ ಹಾಗೂ ಗಂಡ ಸುತ್ತ ಕಾವಲು ನಿಂತಿದ್ದರು. ಈ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿತ್ತು. ಕೆಲ ಕೆಎಸ್‌ಆರ್‌ಟಿಸಿ, ರೈಲ್ವೆ ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರವಿದ್ದು, ಆದರೆ ನಮ್ಮ ಮೆಟ್ರೋದಲ್ಲಿ ಅಂತಹ ಸೌಲಭ್ಯವಿಲ್ಲದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಶಿಶು ಆರೈಕೆ ಕೇಂದ್ರ (ETV Bharat) 2017 ರಿಂದ ನಿರ್ಭಯ ಯೋಜನೆಯಡಿಯಲ್ಲಿ ಹಾಲುಣಿಸುವ ಕೇಂದ್ರವನ್ನು ಕೆಲ ಪ್ರಯಾಣಿಕ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಮಾಹಿತಿಯ ಪ್ರಕಾರ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ತಾಯಂದಿರ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇತರ ನಿಲ್ದಾಣಗಳಲ್ಲಿ ಸಹ ಇಂತಹ ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ.
ಈಟಿವಿ ಭಾರತ ನಗರದ ಹಲವೆಡೆ ರಿಯಾಲಿಟಿ ಚೆಕ್ ನಡೆಸಿದಾಗ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಎರಡು ಹಾಲುಣಿಸುವ ಕೇಂದ್ರಗಳು ಸುಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ. ಇನ್ನು ಯಶವಂತಪುರ, ಪೀಣ್ಯ ಮತ್ತು ಕೆಂಗೇರಿ ಸ್ಯಾಟಲೈಟ್ ನಿಲ್ದಾಣಗಳಲ್ಲಿ ಸಹ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಸುತ್ತಿವೆ.
ಇನ್ನು, ನಗರದ ಬಿಎಂಟಿಸಿಯ ಪ್ರಮುಖ 8 ಬಸ್ ನಿಲ್ದಾಣಗಳಲ್ಲಿ ಮಹಿಳಾ ಸುರಕ್ಷತೆ, ಸೌಕರ್ಯ ಮತ್ತು ಮಹಿಳಾ ಕೇಂದ್ರಗಳಿವೆ. ಬೆಂಗಳೂರಿನ ಎಲ್ಲಾ ಭಾಗಗಳಿಗೆ ಬಸ್ಗಳನ್ನು ಪೂರೈಸುವ ಜಯನಗರ, ಶಾಂತಿ ನಗರ, ಮೆಜೆಸ್ಟಿಕ್, ಕೋರಮಂಗಲ, ವೈಟ್‌ಫೀಲ್ಡ್, ಯಲಹಂಕ, ಬನ್ನೇರುಘಟ್ಟ, ಬನಶಂಕರಿ, ದೊಮ್ಮಲೂರು ಮತ್ತು ಇನ್ನೂ ಹಲವು ಟಿಟಿಎಂಸಿಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಶಿಶು ಆರೈಕೆ ಕೇಂದ್ರ (ETV Bharat) ಮೆಜೆಸ್ಟಿಕ್ನ ಬಿಎಂಟಿಸಿ ಆರೈಕೆ ಕೇಂದ್ರದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಚೈತ್ರಾ ಅವರು, "ಶಿಶು ಆರೈಕೆ ಕೇಂದ್ರಗಳನ್ನು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಖ್ಯ ನಿಲ್ದಾಣಗಳನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲೂ ಇಂತಹ ಕೇಂದ್ರಗಳನ್ನು ಮಾಡಿದರೆ ಅನುಕೂಲವಾಗುತ್ತದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಾದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಯ ನಿವಾಸಿ ಪ್ರಜಾಕ್ತ ಪ್ರದೀಪ್ ಪವಾರ್ ಮಾತನಾಡಿ, "ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಫೀಡಿಂಗ್ ರೂಮ್ ಅನ್ನು ಸ್ವಚ್ಛವಾಗಿ, ಉತ್ತಮವಾಗಿ ಇಡಲಾಗಿದೆ. ಆದರೆ ಇದೇ ಮಾದರಿಯಲ್ಲಿ ದೇಶದ ಹಲವು ನಿಲ್ದಾಣಗಳಲ್ಲಿ ಶಿಶುಗಳಿಗೆ ಹಾಲುಣಿಸುವ ಕೊಠಡಿಗಳನ್ನು ನಿರ್ಮಾಣ ಮಾಡುವ ಅಗತ್ಯವಿದೆ" ಎಂದು ಹೇಳಿದರು.
ಶಿಶು ಆರೈಕೆ ಕೇಂದ್ರ (ETV Bharat) "ಬೆಂಗಳೂರು ಸಾರಿಗೆ ಸಂಸ್ಥೆಯ ಮುಖ್ಯ ನಿಲ್ದಾಣಗಳು ಮತ್ತು ಬಹುತೇಕ ಟಿಟಿಎಂಸಿಗಳಲ್ಲಿ ಶಿಶು ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 18 ಕಡೆ ಕೇಂದ್ರಗಳು ಚಾಲ್ತಿಯಲ್ಲಿವೆ. ಇದನ್ನು ಮಹಿಳಾ ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಈ ಕೊಠಡಿಯಲ್ಲಿ ಕುಳಿತುಕೊಳ್ಳಲು ಆಸನಗಳಿವೆ. ಶಿಶುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಯನ್ನು ಮೀಸಲಿಡಲಾಗಿದೆ. ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ, ಟಾಯ್ಲೆಟ್ ಇದ್ದು, ಅವನ್ನೆಲ್ಲ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ" ಎಂದು ಬಿಎಂಟಿಸಿ ಡಿವಿಶನಲ್ ಟ್ರಾಫಿಕ್ ಮ್ಯಾನೇಜರ್ ನಯನಾ ಹೇಳಿದರು.
ಇದನ್ನೂ ಓದಿ:ಉಡುಪಿ: ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ: ಆರ್‌ಪಿಎಫ್ ಮಹಿಳಾ ಸಿಬ್ಬಂದಿಯಿಂದ ರಕ್ಷಣೆ - Woman saved