ಕರ್ನಾಟಕ

karnataka

ETV Bharat / state

ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ: ವಿಧಾನಸಭೆಯಲ್ಲಿ ವಾಕ್ಸಮರ - ಘೋಷವಾಕ್ಯ ಬದಲಾವಣೆ

ವಸತಿ ಶಾಲೆಗಳಲ್ಲಿ 'ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ' ಎಂಬ ಘೋಷವಾಕ್ಯ ಬದಲಾವಣೆಯು ವಿಧಾನಸಭೆಯಲ್ಲಿ ಭಾರಿ ಗದ್ದಲ ಸೃಷ್ಟಿಸಿತು.

uproar-in-assembly-session-over-change-of-slogan-in-residential-schools
ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ: ವಿಧಾನಸಭೆಯಲ್ಲಿ ವಾಕ್ಸಮರ

By ETV Bharat Karnataka Team

Published : Feb 19, 2024, 6:22 PM IST

ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ: ವಿಧಾನಸಭೆಯಲ್ಲಿ ವಾಕ್ಸಮರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಹಾಕುವ ಘೋಷವಾಕ್ಯ ಬದಲಾವಣೆ ವಿಚಾರವು ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಈ ಹಿಂದೆ ವಸತಿ ಶಾಲೆಗಳಲ್ಲಿ 'ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ' ಎಂಬ ಘೋಷವಾಕ್ಯವನ್ನು 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬದಲಾಯಿಸಿರುವುದು ಗದ್ದಲ ಸೃಷ್ಟಿಸಿತು. ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಷಯ ಪ್ರಸ್ತಾಪಿಸಿ, ''ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯವನ್ನು ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಬದಲಿಸಿ, 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಹಾಕಲು ಉದ್ದೇಶಿಸಲಾಗಿದೆ'' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಬಗ್ಗೆ ತೀರ್ಮಾನಿಸಿದ್ದಾರೆ ಎಂಬ ವಿಚಾರ ವಾಟ್ಸ್​​ ಆ್ಯಪ್​ಗಳಲ್ಲಿ ಹರಿದಾಡುತ್ತಿದೆ. ಇದು ಕುವೆಂಪು ಅವರಿಗೆ ಮಾಡಿದ ಅಪಮಾನ. ಈ ಹಿಂದೆ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂಬ ಸುತ್ತೋಲೆ ಹೊರಡಿಸಿ, ವಾಪಸ್ ಪಡೆದಿರುವ ಉಲ್ಲೇಖವಿದೆ. ಇದೊಂದು ಗಂಭೀರ ವಿಚಾರವಾಗಿದ್ದು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಆಗ ಬಿಜೆಪಿಯ ಹಿರಿಯ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಎದ್ದು ನಿಂತು ಮಾತನಾಡಲು ಮುಂದಾದರು. ಆ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾತನಾಡಿ, ''ವಾಸ್ತವಾಂಶದ ಆಧಾರದ ಮೇಲೆ ಉತ್ತರ ಕೊಡುತ್ತೇವೆ. ಹೆಚ್ಚಿಗೆ ಮಾತನಾಡುವುದಾದರೆ, ನಾವೂ ಮಾತನಾಡಬಹುದು'' ಎಂದಾಗ, ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಆಗ ಏರಿದ ಧ್ವನಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಮಾತನಾಡಲು ಮುಂದಾದಾಗ ವಾಗ್ವಾದ ನಡೆದು ಗದ್ದಲ ಉಂಟಾಯಿತು.

ಒಂದು ಹಂತದಲ್ಲಿ ಕೃಷ್ಣಬೈರೇಗೌಡರು, ''ಕುವೆಂಪು ಅವರ ವಿಚಾರವನ್ನು ಪಠ್ಯದಿಂದ ಕಿತ್ತು ಹಾಕಿದವರು ನೀವು'' ಎಂದು ತಿರುಗೇಟು ನೀಡಿದರು. ಸಚಿವ ಪ್ರಿಯಾಂಕ್​ ಖರ್ಗೆ ಅವರು ಕೂಡ ಕೃಷ್ಣಬೈರೇಗೌಡರ ಮಾತಿಗೆ ಬೆಂಬಲ ನೀಡಲು ಮುಂದಾದರು. ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ''ಈ ವಿಚಾರದಲ್ಲಿ ಸರ್ಕಾರದ ನೀತಿ ಇರಬೇಕು. ಒಬ್ಬ ಪ್ರಧಾನ ಕಾರ್ಯದರ್ಶಿ ಈ ರೀತಿ ಮಾಡಿರುವುದು ಸರಿಯಲ್ಲ. ವಿಧಾನಸೌಧದ ಮುಂಭಾಗದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ವಾಕ್ಯವಿದೆ. ಇದನ್ನೂ ಬದಲು ಮಾಡುತ್ತೀರಾ? ಒಬ್ಬ ಅಧಿಕಾರಿ ಈ ರೀತಿ ಆದೇಶ ಹೊರಡಿಸಲು ಅಧಿಕಾರ ಕೊಟ್ಟವರು ಯಾರು?'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ''ಈ ಸರ್ಕಾರದಲ್ಲಿ ಲಂಗುಲಗಾಮು ಯಾವುದೂ ಇಲ್ಲ'' ಎಂದರು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಮಧ್ಯ ಪ್ರವೇಶಿಸಿ, ''ಈ ವಿಚಾರದ ಬಗ್ಗೆ ನಾಳೆ ಸಮಾಜ ಕಲ್ಯಾಣ ಸಚಿವರು ಉತ್ತರ ಕೊಡುತ್ತಾರೆ'' ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ:ಪ್ರಶ್ನೆ ಕೇಳಲು ವಿಳಂಬ ಮಾಡಿದ ಕಾಂಗ್ರೆಸ್​​ ಶಾಸಕರು: ಗಾಡ್ ಫಾದರ್​​ಗಳ ಬಗ್ಗೆ ಸದನದಲ್ಲಿ ಚರ್ಚೆ

ABOUT THE AUTHOR

...view details