ರಾಯಚೂರು :ಕಾಂಗ್ರೆಸ್ನವರು ಬರೀ ಹುಲಿ ಬಂತೂ ಹುಲಿ, ಪೆಪ್ಪರ್ ಮೆಂಟು, ಪೆಪ್ಪರ್ ಮೆಂಟು ಅಂತಾ ಎಷ್ಟು ಜನರ ಕಿವಿಗೆ ಹೂ ಇಡುವುದನ್ನು ಮಾಡುತ್ತಾರೆ? ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರಶ್ನಿಸಿದ್ದಾರೆ.
ರಾಯಚೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಗರಣ ಬಗ್ಗೆ ಕಾಂಗ್ರೆಸ್ ಹೋರಾಟದ ಕುರಿತು ಮಾತನಾಡಿದರು. ಕೋವಿಡ್ ತನಿಖೆ ಅವಶ್ಯಕತೆ ಇದೆಯೇ?, ಮುಡಾ ಹಗರಣ ರಾಜ್ಯದಲ್ಲಿ ಕುದಿಯುತ್ತಿದೆ ಎಂದು ವ್ಯಂಗ್ಯವಾಡಿದರು. ಮುಡಾ ಹಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಭಾರತೀಯ ಸಂಸ್ಕೃತಿಯಲ್ಲಿ ಒಂದು ಮಾತು ಇದೆ. ತುಂಬಾ ದಿನ ಎಲ್ಲರಿಗೂ ಮೋಸ ಮಾಡಲು ಆಗಲ್ಲ. ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದೆ. 7,900 ಸೈಟ್ಗಳನ್ನ ಎರಡೂವರೆ ವರ್ಷದಲ್ಲಿ ತಯಾರು ಮಾಡಿಸಿದೆ. ಕೋವಿಡ್ ಮುಗಿದ ಮೇಲೆ ಹರಾಜು ಹಾಕಿಸಿದೆ. 15 ಸಾವಿರ ಕೋಟಿ ಬರುತ್ತೆ ಅಂತಾ ಮಾಡಿಸಿದೆ. ರಾತ್ರಿ ಒಂದು ಗಂಟೆಗೆ ನನಗೆ ಮೈಸೂರಿನಿಂದಲೇ ಎತ್ತಂಗಡಿ ಆಯ್ತು ಎಂದರು.
ನಾವು ತಿಳಿದುಕೊಂಡ ಮಟ್ಟದಲ್ಲಿ ಈ ಕೇಸ್ ಇಲ್ಲ. ಇನ್ನೂ ಕೂಡ ಡೀಪ್ ಆಗಿ ಏನೇನೋ ಇದೆ. ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈಗ ಚರ್ಚೆ ಮಾಡುವುದು ಅನಾವಶ್ಯಕ. ನಾವು ಎಷ್ಟೇ ದೊಡ್ಡವರಾದರೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅಂಬೇಡ್ಕರ್ ಎಲ್ಲರಿಗೂ ಒಂದೇ ಕಾನೂನು ಮಾಡಿದ್ದಾರೆ ಎಂದು ತಿಳಿಸಿದರು.