ಹುಬ್ಬಳ್ಳಿ:'ಅಮೃತ್ ಭಾರತ್ ಸ್ಟೇಷನ್ ಯೋಜನೆ'ಯಡಿ ದೇಶಾದ್ಯಂತ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1,500 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಇದೇ ಯೋಜನೆಯಡಿ ಧಾರವಾಡ ಲೋಕಸಭಾ ಕ್ಷೇತ್ರದ ಅಣ್ಣಿಗೇರಿ, ನವಲಗುಂದ ಗೇಟ್ ಲೆವೆಲ್ ಕ್ರಾಸಿಂಗ್ 18 ಹಾಗೂ ಹುಲಗೂರ ಲೆವೆಲ್ ಕ್ರಾಸಿಂಗ್ 267 ಮತ್ತು 266ರಲ್ಲಿಯೂ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸಲು ಶ್ರಮ: ದೇಶ ಎಂದರೆ ರಾಜಧಾನಿ ಅಥವಾ ಮೆಟ್ರೋ ನಗರಗಳಷ್ಟೇ ಅಲ್ಲ. ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಇಂದಿನ ಉದ್ಘಾಟನೆ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಸಮಗ್ರ ಅಭಿವೃದ್ಧಿಯಿಂದ ಮಾತ್ರ ದೇಶದ ವಿಕಾಸ ಸಾಧ್ಯವೆಂದು ನಂಬಿರುವ ಪ್ರಧಾನಿ ಮೋದೀಜಿ, ಕಳೆದ ಹತ್ತು ವರ್ಷಗಳಿಂದ ಭಾರತೀಯರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಹಾಗೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಸಹಕರಿಸಿದ್ದಾರೆ. ಇವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕಳಸಾ-ಬಂಡೂರಿ ಇಸಿ ವಿನಾಯಿತಿ ಸಿಕ್ಕಿದೆ: ಕಳಸಾ-ಬಂಡೂರಿ ಯೋಜನೆಗೆ ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ಆದರೆ, ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ಬೋರ್ಡ್ ಕ್ಲಿಯರೆನ್ಸ್ ಸಿಗಬೇಕಿದೆ ಅಷ್ಟೇ. ನಾವು ಆ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.