ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ: ಮನೆ ದೇವರ ದರ್ಶನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ - Prahlada Joshi - PRAHLADA JOSHI

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರುವ ನರಸಿಂಹ ದೇವರ ದರ್ಶನ‌ ಮಾಡಿದ್ದಾರೆ.

ಮನೆ ದೇವರ ದರ್ಶನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಮನೆ ದೇವರ ದರ್ಶನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

By ETV Bharat Karnataka Team

Published : Mar 29, 2024, 6:57 PM IST

Updated : Mar 29, 2024, 7:07 PM IST

ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ವಿಜಯಪುರ :ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಮನೆ ದೇವರ ದರ್ಶನ ಮಾಡಿದ್ದಾರೆ. ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರುವ ನರಸಿಂಹ ದೇವರ ದರ್ಶನ‌ಮಾಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ದೇವರ ದರ್ಶನದ ಬಳಿಕ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಹಾಗೂ ಬಳಿಕ ಜೊತೆಗೆ ನಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಕುಟುಂಬ ಸಮೇತವಾಗಿ ಮನೆ ದೇವರ ದರ್ಶನ ಮಾಡುವೆ. ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಮುಂಬರುವ 15 ರಂದು ನಾಮಪತ್ರ ಸಲ್ಲಿಸುವೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರು ನರಸಿಂಹ ದೇವರ ದರ್ಶನ ಮಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ಪ್ರಚಂಡ ಬಹುಮತ ಅವರಿಗೆ ಸಿಗಬೇಕು. ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳು ಬೇಕು. ಆ ಎಂಪಿಗಳ ಪೈಕಿ ನಾನು ಒಬ್ಬ ಇರಬೇಕೆಂದರು.

ಇದೇ ವೇಳೆ ಮಾತನಾಡುತ್ತಾ ಬಂಜಾರಾ ಮತಗಳು ನನಗೆ ಬೇಡ ಎಂದು ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಹೇಳಿದ್ದಾರೆ ಎಂಬ ಆರೋಪದ ವಿಚಾರವಾಗಿ ಉತ್ತರಿಸುತ್ತಾ, ಆ ರೀತಿ ಯಾರೂ ಹೇಳಲು ಸಾಧ್ಯವಿಲ್ಲ. ಆ ರೀತಿ ಹೇಳಿದರೆ ಅದನ್ನು ಸರಿಪಡಿಸಲಾಗುತ್ತದೆ. ಎಲ್ಲ ವರ್ಗದ ಮತಗಳು ನಮಗೆ ಬೇಕೆಂದು ಸಂಸದ ಜೋಶಿ ಅವರು ಹೇಳಿದರು.

ಎನ್​ಡಿಎ ಮೈತ್ರಿಕೂಟದ 400ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ದೇಶದಲ್ಲಾದ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ದುರ್ಬಲ ಆರ್ಥಿಕತೆ ಹೊಂದಿದ್ದ ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿ ಹೊಂದಿರುವ ದೇಶವಾಗಿದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವನ್ನಾಗಿಸುವೆ ಎಂದು ಮೋದಿ ಗ್ಯಾರಂಟಿ ಕೊಟ್ಟಿದ್ದಾರೆ ಎಂದರು.

ಮೋದಿ ಅವರ ಅಧಿಕಾರದಲ್ಲಿ ಉಗ್ರವಾದ ನಿಯಮಿತವಾಗಿ ಕಡಿಮೆಯಾಗಿದೆ. ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ವಿಕಸಿತ ಭಾರತವಾಗಲು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು. ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು, ತಪ್ಪು ತಿಳಿವಳಿಕೆಗಳು ಬರಬಾರದು. ಎಲ್ಲವನ್ನೂ ಸರಿ ಮಾಡಿಕೊಂಡು ಹೋಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಲಹೆ ನೀಡಿದರು.

ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿ ಎಂದು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ಅವರ ಭಾಷೆ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಬಾಯಿಗೆ ಬಂದಂತೆ ಮನಬಂದಂತೆ ಏಕವಚನದಲ್ಲಿ ಟೀಕೆ ಮಾಡುತ್ತಾರೆ. ಇವರು ಹತಾಶರಾಗಿ ಸರ್ಟಿಫಿಕೇಟ್ ಕೊಡುವ ಮಟ್ಟಕ್ಕೆ ಹೋಗಿದ್ದಾರೆ ಎಂದರು. ತಮ್ಮ ಎಲ್ಲ ದೋಷಗಳಿಗೂ ಸಿದ್ದರಾಮಯ್ಯ ಕೇಂದ್ರವನ್ನ ದೂಷಿಸುವ ಮೂಲಕ ಕಾಲ ಹರಣ ಮಾಡುತ್ತಾರೆ. ಅವರ ಮಗ ಸರ್ಟಿಫಿಕೇಟ್ ಕೊಡುವ ಹಂತಕ್ಕೆ ಹೋಗಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲಾ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲ್ಲ ಎಂದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ:ವಿಜಯಪುರದ ತೊರವಿ ಗ್ರಾಮದ ನರಸಿಂಹ ದೇವಸ್ಥಾನದ ಬಳಿ ಜೋಶಿಯವರನ್ನ ಯತ್ನಾಳ್ ಭೇಟಿಯಾಗಿದ್ದಾರೆ. ಭೇಟಿಯ ಬಳಿಕ ಜೋಶಿ ಅವರ ಕಾರಿನಲ್ಲಿಯೇ ಖಾಸಗಿ ಹೋಟೆಲ್​ಗೆ ನಗರ ಶಾಸಕ ಯತ್ನಾಳ್​ ತೆರಳಿದ್ದಾರೆ. ಈ ಸಂದರ್ಭ ದೇವಸ್ಥಾನದ ಎದುರು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಾನು ಈ ಮುಂಚೆ ಹೇಳಿದ್ದೇನೆ. ಪಾರ್ಟಿ ಯಾರನ್ನು ಕ್ಯಾಂಡಿಡೇಟ್ ಎಂದು ನಿರ್ಣಯ ಮಾಡುತ್ತದೆಯೋ ಅವರ ಚುನಾವಣೆ ಮಾಡುವುದು ಎಂದು. ನಮ್ಮದು ಯಾವುದೇ ಬೇಡಿಕೆಯ ಬಂಡಾಯ ಇಲ್ಲ ಎಂದಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಬಂಡಾಯ ಭಿನ್ನಮತ ಇಲ್ಲ. ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು, ಹಿಂದುತ್ವದ ದೃಷ್ಟಿಯಿಂದ ನಾವು ಚುನಾವಣೆ ಮಾಡುತ್ತೇವೆ. ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ತೊರವಿಯ ನರಸಿಂಹ ದೇವಸ್ಥಾನದ ಬಳಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ತಿಳಿಸಿದ್ದಾರೆ.

ಇದನ್ನೂ ಓದಿ :ಆಗ ಗ್ಯಾರಂಟಿ ಜಾರಿ ಆಶ್ವಾಸನೆ, ಈಗ ಗ್ಯಾರಂಟಿ ರದ್ದುಪಡಿಸೋ ಬೆದರಿಕೆ: ಸರ್ಕಾರದ ವಿರುದ್ದ ಜೋಶಿ‌ ಕಿಡಿ

Last Updated : Mar 29, 2024, 7:07 PM IST

ABOUT THE AUTHOR

...view details